

ಮಂಗಳೂರು: ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಬಾಲ್ಯದ ಕನಸಾಗಿತ್ತು. ಅದಕ್ಕಾಗಿ ಸತತ ಬೆಂಗಳೂರು, ಆಫ್ರಿಕಾ, ಜರ್ಮನಿ ಮೊದಲಾದ ಕಡೆಗಳಲ್ಲಿ ತರಬೇತಿ ಪಡೆದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡೆ. ಉತ್ತಮ ರೀತಿಯಲ್ಲಿ ಆಟವಾಡಿ ಕ್ವಾರ್ಟರ್ ಫೈನಲ್ ತನಕ ಬಂದು ಅರ್ಧದಷ್ಟು ಕನಸು ನನಸಾದ ಖುಷಿ ಇದೆ ಎಂದು ಒಲಿಂಪಿಕ್ಸ್ನಲ್ಲಿ ಭಾರತ ತಂಡದಲ್ಲಿದ್ದ ಮಂಗಳೂರಿನ ಟೇಬಲ್ ಟೆನ್ನಿಸ್ ಕ್ರೀಡಾಪಟು ಅರ್ಚನಾ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಅರ್ಚನಾ ಕಾಮತ್ ಮೂಲತಃ ಮಂಗಳೂರಿನ ಕೊಂಚಾಡಿಯವರು. ತಂದೆ ಡಾ.ಗಿರೀಶ್ ಕಾಮತ್, ತಾಯಿ ಡಾ.ಅನುರಾಧಾ ಕಾಮತ್ ವೈದ್ಯರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ತಾಯಿ ಮಗಳ ಟೇಬಲ್ ಟೆನ್ನಿಸ್ ಕ್ರೀಡೆಗೆ ಪೂರ್ಣ ಸಮಯವನ್ನು ನೀಡುತ್ತಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿ ಕುಟುಂಬ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಟೇಬಲ್ ಟೆನ್ನಿಸ್ನಲ್ಲಿ ಆಸಕ್ತಿ ಬೆಳೆಸಿಕೊಂಡು ಮಗಳು ಮಾಡಿರುವ ಸಾಧನೆ ನಮಗೆ ಮಾತ್ರವಲ್ಲ, ರಾಜ್ಯ, ದೇಶಕ್ಕೆ ಹೆಮ್ಮೆ ತಂದಿದೆ. ಈ ಹಿಂದೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಹಲವಾರು ಪದಕಗಳನ್ನು ಪಡೆದಿದ್ದಾಳೆ ಎಂದು ಡಾ.ಗಿರೀಶ್ ಕಾಮತ್ ‘ವಿಜಯವಾಣಿ’ಗೆ ತಿಳಿಸಿದರು.
ಒಲಿಂಪಿಕ್ಸ್ನಲ್ಲಿ ಆಟವಾಡಲು ಪುರುಷರ ಹಾಗೂ ಮಹಿಳೆಯರ ಟೇಬಲ್ ಟೆನ್ನಿಸ್ ತಂಡ ಆಯ್ಕೆ ಆಗಿರುವುದು ಇತಿಹಾಸದಲ್ಲೇ ಮೊದಲು. ಈ ಹಿಂದೆ ಒಬ್ಬರು ಅಥವಾ ಇಬ್ಬರು ಆಟವಾಡುತ್ತಿದ್ದರು. ಈ ಬಾರಿಯ ತಂಡದಲ್ಲಿ ಐದು ಮಂದಿ ಇದ್ದರು. ಅವರಲ್ಲಿ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ಅರ್ಚನಾ ಕಾಮತ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡಕ್ಕೆ ಆಟವಾಡಲು ಅವಕಾಶ ಲಭಿಸಿತ್ತು. ಪುತ್ರಿ ಅರ್ಚನಾಗೆ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಆಟವಾಡಲು ಅವಕಾಶ ಸಿಕ್ಕಿರುವುದು ನಮಗೆ ಖುಷಿ ತಂದಿದೆ. ಸಿಂಗಲ್ಸ್ನಲ್ಲಿ ಅಂಗಣದಲ್ಲಿ ಹುಲಿಯಂತೆ ಆಟವಾಡಿದ್ದಾಳೆ. ಕ್ರೀಡೆ ಎಂದರೆ ಅದರಲ್ಲಿ ಸೋಲು ಗೆಲುವು ಇದ್ದದ್ದೇ. ಪ್ರಬಲ ತಂಡದವರಿಗೆ ಸ್ಪರ್ಧೆ ನೀಡಿದ್ದು ಆಕೆಯ ಸಾಧನೆ. ಗುರುವಾರ ಅಥವಾ ಶುಕ್ರವಾರ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಬಳಿಕ ಕೋಚ್ ಸಹಿತ ನಾವೆಲ್ಲ ಮುಂದಿನ ಸ್ಪರ್ಧೆಗೆ ಅಣಿಯಾಗುವ ಕುರಿತು ಚರ್ಚಿಸಲಿದ್ದೇವೆ ಎಂದು ಡಾ.ಗಿರೀಶ್ ಕಾಮತ್ ತಿಳಿಸಿದ್ದಾರೆ.
ಶೈಕ್ಷಣಿಕವಾಗಿಯೂ ಪ್ರತಿಭಾವಂತೆ
ತನ್ನ ಕ್ರೀಡಾ ವೃತ್ತಿ ಜೀವನದ ಜತೆ ಅರ್ಚನಾ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. 2016ರಲ್ಲಿ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್, ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದರು. ಅರ್ಥಶಾಸ್ತ್ರದಲ್ಲಿ ಬಿಎ ಆನರ್ಸ್ ಪೂರ್ಣಗೊಳಿಸಿದ ಬಳಿಕ ಸದ್ಯ ಅಂತಾರಾಷ್ಟ್ರೀಯ ಸಂಬಂಧಗಳು, ಭದ್ರತೆ ಮತ್ತು ಕಾರ್ಯತಂತ್ರದಲ್ಲಿ ಎಂ.ಎ. ಪೂರ್ಣಗೊಳಿಸಿದ್ದಾರೆ.
ನಿರೀಕ್ಷೆ ಮೂಡಿಸಿದ್ದ ಅರ್ಚನಾ: ಪಂದ್ಯಾವಳಿಯಲ್ಲಿ ಜರ್ಮನಿಯ ಕ್ಸಿಯೋನಾ ವಿರುದ್ಧ 3-1 ಅಂತರದಲ್ಲಿ ಗೆಲುವು ಸಾಧಿಸಿದ ಅರ್ಚನಾ ಕಾಮತ್ ಭಾರತದ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದ್ದರು. ಆರೆ ಬಳಿಕದ ಪಂದ್ಯದಲ್ಲಿ ಕೌಫ್ಮೆನ್ ವಿರುದ್ಧ ತಂಡದ ಶ್ರೀಜಾ 0-3 ಅಂತರದಲ್ಲಿ ಪರಾಭವಗೊಳ್ಳುವುದರೊಂದಿಗೆ ಭಾರತದ ಹೋರಾಟ ಅಂತ್ಯಗೊಂಡಿತು.