ಪುಣೆ ಪೋರ್ಶೆ ಕಾರು ಅಪಘಾತ: ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದ ಮೃತರ ಪೋಷಕರು

pune
Published on

ಮುಂಬೈ: ಪುಣೆಯಲ್ಲಿ ಕಳೆದ ಭಾನುವಾರ ನಸುಕಿನಲ್ಲಿ 24 ವರ್ಷದ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು ಎಂದು ಮೃತರ ಪೋಷಕರು ಶುಕ್ರವಾರ ಒತ್ತಾಯಿಸಿದರು.

ಅಲ್ಲದೆ ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರದಲ್ಲಿ ನಡೆಸದೆ ಸಂತ್ರಸ್ತರ ಮೂಲವಾದ ಮಧ್ಯಪ್ರದೇಶದಲ್ಲಿ ನಡೆಸಬೇಕು ಎಂದು ಮೃತ ಕುಟುಂಬಸ್ಥರು ಆಗ್ರಹಿಸಿದರು.

ಮಧ್ಯಪ್ರದೇಶ ಮೂಲದ 24 ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಅವರು ಮೇ 19 ರಂದು ಪುಣೆ ನಗರದಲ್ಲಿ 17 ವರ್ಷದ ಹುಡುಗ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ತಮ್ಮ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಅಶ್ವಿನಿಯ ತಂದೆ ಸುರೇಶ್ ಕುಮಾರ್ ಕೋಷ್ಟ, ನಮಗೆ ನ್ಯಾಯ ಸಿಗಬೇಕಾದರೆ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು. ಅಪರಾಧದ ಗಂಭೀರ ಸ್ವರೂಪವನ್ನು ಪರಿಗಣಿಸಿ ಅಪ್ರಾಪ್ತ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತನ್ನ ಮಗಳು ಮತ್ತು ಅನೀಶ್ ಮೇಲೆ ತನ್ನ ಕಾರನ್ನು ಚಲಾಯಿಸಿದಾಗ ಆರೋಪಿಯು ಮದ್ಯ ಸೇವಿಸಿದ್ದ. ತ್ವರಿತ ಜಾಮೀನು ಮತ್ತು ಪೊಲೀಸರ ಮರುಪರಿಶೀಲನಾ ಮನವಿಯ ಮೇಲೆ ಆಕ್ರೋಶ ವ್ಯಕ್ತವಾದ ಬಳಿಕ ಉದ್ಯಮಿ ವಿಶಾಲ್ ಅಗರ್ವಾಲ್ ಬಂಧಿಸಲಾಗಿದೆ. ಅಲ್ಲದೇ ಆತನ ಮಗನಾದ ಆರೋಪಿಯನ್ನು ರಿಮಾಂಡ್ ರೂಮ್‍ಗೆ ಕಳಿಸಲಾಗಿದೆ ಎಂದಿದ್ದಾರೆ.

ಇದೇ ವಿಚಾರವಾಗಿ ಅನೀಶ್ ತಂದೆ ಓಂ ಪ್ರಕಾಶ್ ಅವಧಿಯಾ ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಆರೋಪಿಗೆ ಚಾಲನಾ ಪರವಾನಗಿ ಇಲ್ಲದಿದ್ದರೂ ಪೊಲೀಸ್ ಠಾಣೆಯಲ್ಲಿ ವಿಐಪಿ ಸ್ಥಾನಮಾನ ನೀಡಲಾಗಿದೆ. ಈ ಅಪಘಾತವನ್ನು ಡಬಲ್ ಮರ್ಡರ್ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net