

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಶಿಶು ಮಂದಿರಗಳು ಸಂಸ್ಕೃತಿ, ಸಂಸ್ಕಾರ ಹಾಗೂ ಸಭ್ಯತೆ ಬೆಳೆಸುವ ಕೇಂದ್ರಗಳಾಗಿವೆ. ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸಿ ಅವರನ್ನು ಸಜ್ಜನರನ್ನಾಗಿ ಮಾಡುವ ಪ್ರಯತ್ನದೊಂದಿಗೆ ಭಾರತೀಯ ಸನಾತನ ಸಂಸ್ಕೃತಿ, ಸಂಸ್ಕಾರ ನೀಡುವ, ಸಮಾಜ ಪರಿವರ್ತನೆಯ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಶನಿವಾರ ಪಾಲಕರ ಸಭೆಯಲ್ಲಿ ಮಾತನಾಡಿದರು.ಮಾತೃ ಮಂದಿರ, ಜಲಪರ್ಯಾವರಣ, ಗೃಹ ಮಿಲನ ಮೊದಲಾದ ಕಾರ್ಯಕ್ರಮಗಳ ಮೂಲಕ ಪರಿಸರ ಹಾಗೂ ಸಮಾಜ ಸಂರಕ್ಷಣೆ ಮಾಡುವ ಯೋಜನೆ ರೂಪಿಸಿದೆ. ಶಿಶು ಮಂದಿರದ ಶಿಕ್ಷಣ ಹಾಗೂ ಅಭಿವೃದ್ಧಿ ಬಗ್ಗೆ ಪಾಲಕರೊಂದಿಗೆ ಚರ್ಚೆ ನಡೆಸಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ನೀಡಬೇಕಾದ ಸಂಸ್ಕೃತಿ, ಸಂಸ್ಕಾರ ಹಾಗೂ ನಮ್ಮ ಧರ್ಮ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಶು ಮಂದಿರಗಳು ಶಿಕ್ಷಣ ನೀಡಲಿದೆ ಎಂದರು.
ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ.ಕಾಶೀನಾಥ ಪೈ, ಸದಸ್ಯರಾದ ಶ್ರೀನಿವಾಸ ಎಂ., ಭಾಸ್ಕರ ಎಚ್.ಜಿ., ವಿಜಯಶ್ರೀ ವಿ.ಆಚಾರ್ಯ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಸಹಾಯಕಿ ರತ್ನಾ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.