

airport : 10 ವರ್ಷದ ಮಗುವಿನ ಪಾಸ್‌ಪೋರ್ಟ್ ಅವಧಿ ಮುಗಿದಿದೆ ಎಂದು ತಿಳಿದ ಪೋಷಕರು ಆತನನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಫಾರಿನ್ ಟ್ರಿಪ್ ಹೋಗಿದ್ದಾರೆ ಎನ್ನಲಾದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗಿದೆ.
ನಡೆದಿದ್ದೇನು?:
ದಂಪತಿ ಮಗನನ್ನು ಕರೆದುಕೊಂಡು ಫಾರಿನ್ ಟ್ರಿಪ್ ಹೊರಟಿದ್ದರು. ಈ ವೇಳೆ ಸ್ಪೇನ್‌ನ ಬಾರ್ಸಿಲೋನಾದ ವಿಮಾನ ನಿಲ್ದಾಣದಲ್ಲಿ ಎಂಟ್ರಿ ಪ್ರಕ್ರಿಯೆಯ ಸಮಯದಲ್ಲಿ ಮಗುವಿನ ಪಾಸ್‌ಪೋರ್ಟ್ ಅವಧಿ ಮುಗಿದಿದೆ. ಪ್ರಯಾಣಕ್ಕಾಗಿ ಮಗುವಿಗೆ ವೀಸಾ ಕೂಡ ಇರಲಿಲ್ಲ ಎನ್ನುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಗಮನಕ್ಕೆ ಬರುತ್ತದೆ. ಅವರು ಮಗುವನ್ನು ವಿಮಾನ ಹತ್ತಿಸಲು ನಿರಾಕರಿಸಿದ್ದಾರೆ. ಪ್ರವಾಸವನ್ನು ಮುಂದೂಡುವ ಬದಲು ಮಗುವಿನ ಪೋಷಕರು ಮಗುವನ್ನು ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ತಾವಿಬ್ಬರು ಪ್ರವಾಸ ಹೋಗಿದ್ದಾರೆ.
ಮಗುವನ್ನು ಕರೆದುಕೊಂಡು ಹೋಗುವಂತೆ ಸಂಬಂಧಿಕರ ಬಳಿ ಪೋಷಕರು ಹೇಳಿದ್ದು, ಆದ್ರೆ ಸಂಬಂಧಿಕರು ಬರುವ ಮೊದಲು ಅಧಿಕಾರಿಗಳು ಮಗು ಒಂಟಿಯಾಗಿ ಏರ್ ಪೋರ್ಟ್‌ನಲ್ಲಿ ಇರುವುದನ್ನು ಗಮನಿಸಿದ್ದಾರೆ. ಪೊಲೀಸರು ಬಂದು ಮಗುವನ್ನು ಸುರಕ್ಷಿತವಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪೋಷಕರನ್ನು ಸಂಪರ್ಕಿಸಿದಾಗ, ಫ್ಲೈಟ್ ಟಿಕೆಟ್‌ಗಳನ್ನು ಕಳೆದುಕೊಳ್ಳಲು ಬಯಸದ ಕಾರಣ ನಾವು ನಮ್ಮ ಮಗುವನ್ನು ಒಂಟಿಯಾಗಿ ವಿಮಾನ ನಿಲ್ದಾಣದಲ್ಲಿ ಬಿಟ್ಟು ಟ್ರಿಪ್ ಹೋಗಬೇಕಾಯಿತು, ಜೊತೆಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ನಮ್ಮ ಸಂಬಂಧಿಕರ ಬಳಿ ಹೇಳಿಕೊಂಡಿದ್ದೇವೆ ಎಂದು ಅಧಿಕಾರಿಗಳ ಬಳಿ ಪೋಷಕರು ಹೇಳಿಕೊಂಡಿದ್ದಾರೆ.
ಸ್ಪೇನ್‌ನ ವಿಮಾನ ನಿಲ್ದಾಣವೊಂದರಲ್ಲಿ ವಾಯು ಕಾರ್ಯಾಚರಣೆ ಸಂಯೋಜಕಿ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ 10 ವರ್ಷದ ಮಗುವಿನ ಪಾಸ್‌ಪೋರ್ಟ್ ಅವಧಿ ಮುಗಿದಿರುವುದನ್ನು ಗಮನಿಸಿದ ಪೋಷಕರು ಅವನನ್ನು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಬಿಟ್ಟು ರಜೆಯತ್ತ ತೆರಳಿದ್ದಾರೆ ಎಂದು ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸುದ್ದಿ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆತ್ತವರ ನಿರ್ಧಾರದ ಕುರಿತಾಗಿ ಚರ್ಚೆ ಶುರುವಾಗಿದೆ.