

ಸಂದೀಪ್ ಸಾಲ್ಯಾನ್ ಬಂಟ್ವಾಳ
ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳಲ್ಲಿ ಒಂದಾಗಿರುವ ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ಸಂಪರ್ಕ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಕಳೆದಿದ್ದು, ವಾಹನ ಸಂಚಾರ ಅಸಾಧ್ಯವಾಗುವ ರೀತಿಯಲ್ಲಿ ಮುಖ್ಯ ರಸ್ತೆ ಹದಗೆಟ್ಟಿದೆ.
ಹತ್ತು ವರ್ಷಗಳಿಗೂ ಅಧಿಕ ಕಾಲದಿಂದ ಈ ರಸ್ತೆ ಡಾಂಬರು ಕಂಡಿಲ್ಲ. ಪರಿಣಾಮ ಇಂದು ರಸ್ತೆಯಲ್ಲಿ ಹೊಂಡವೋ, ಹೊಂಡದಲ್ಲಿ ರಸ್ತೆಯೋ ಎಂಬುದು ತಿಳಿಯದಂತಾಗಿದೆ. ವಾಹನ ಸವಾರರು ಗುಂಡಿಗಳನ್ನು ತಪ್ಪಿಸಿ ಸಂಚರಿಸಲು ಹೆಣಗಾಟ ನಡೆಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಜೋರಾಗಿ ಮಳೆ ಬಂದರಂತೂ ರಸ್ತೆಯ ಹೊಂಡ ಗುಂಡಿಗಳಲ್ಲಿ ಮಳೆ ನೀರು ನಿಂತು ಹೊಂಡಗಳ ಆಳ ಅಗಲವೂ ಗೊತ್ತಾಗದೆ ವಾಹನ ಸವಾರರು ಸಂಚರಿಸಲು ಭಯಪಡುವ ಪರಿಸ್ಥಿತಿ ಇದೆ.
ಮಳೆ ನೀರಿನಿಂದ ಆವೃತವಾಗುವ ರಸ್ತೆ ಹೊಂಡಗಳಿಂದ ಕೆಸರು ಮಿಶ್ರಿತ ನೀರು ವಾಹನ ಸಂಚಾರದ ವೇಳೆ ರಸ್ತೆ ಬದಿ ನಿಂತಿರುವ, ನಡೆದುಕೊಂಡು ಹೋಗುವ ಸಾರ್ವಜನಿಕರ ಮೇಲೆ ಎರಚುತ್ತಿವೆ. ರಸ್ತೆ ಬದಿಯ ಅಂಗಡಿ, ಮನೆಗಳ ಒಳಗೂ ವಾಹನ ಸಂಚಾರದ ವೇಳೆ ಮಳೆ ನೀರು ಅಭಿಷೇಕವಾಗುತ್ತಿದ್ದು, ಪರಿಸರ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯ ಹೊಂಡ ಗುಂಡಿಗಳಿಂದಾಗಿ ಜನರು ರಾತ್ರಿ ವೇಳೆ ನಡೆದಾಡುವ ಸಂದರ್ಭ ರಸ್ತೆ ಹೊಂಡಕ್ಕೆ ಬಿದ್ದು ಕಾಲು ತಿರುವಿನಂತಹ ಗಂಭೀರ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಈ ಪ್ರದೇಶದ ರಸ್ತೆಗಳ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು, ಇರುವ ಚರಂಡಿಗಳ ಹೂಳೆತ್ತದೆ ಕಳೆ ಗಿಡಗಳು ತುಂಬಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ರಸ್ತೆಗಳು ಹಾಳಾಗಲು ಪ್ರಮುಖ ಕಾರಣವಾಗಿದೆ.
ಪ್ರತಿಭಟನೆಗೆ ಸಿದ್ಧತೆ
ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ಕದ ತಟ್ಟಿದರೂ ಯಾವುದೇ ರೀತಿಯ ಪ್ರತಿಸ್ಪಂದನೆ ದೊರೆಯುತ್ತಿಲ್ಲ. ತಕ್ಷಣ ಇಲ್ಲಿನ ರಸ್ತೆ ಅವ್ಯವಸ್ಥೆಗೆ ಕಾಯಕಲ್ಪ ಒದಗಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖಾ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಾಗಲಿ, ಪುರಸಭಾ ಕೌನ್ಸಿಲರ್‌ಗಳಾಗಲಿ ಯಾವುದೇ ಸ್ಪಂದನೆ ನೀಡದಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಪೇಟೆಯಲ್ಲಿ ಸರ್ಕಾರಿ, ಖಾಸಗಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆ, ಆಸ್ಪತ್ರೆ, ಬ್ಯಾಂಕುಗಳು, ಪಾಣೆಮಂಗಳೂರು ಹಾಗೂ ನಂದಾವರ ದೇವಸ್ಥಾನಗಳು, ಮಸೀದಿಗಳು, ದರ್ಗಾಗಳು ಮೊದಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರಗಳಿದ್ದು, ತಕ್ಷಣ ಸಂಬಂಧಪಟ್ಟವರು ಇಲ್ಲಿನ ರಸ್ತೆಗೆ ಕಾಯಕಲ್ಪ ಒದಗಿಸಬೇಕು. ಸತೀಶ್ ಪಿ.ಸಾಲ್ಯಾನ್ ಮೆಲ್ಕಾರ್ ಸಾಮಾಜಿಕ ಕಾರ್ಯಕರ್ತ ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್‌ವರೆಗೆ ಮುಖ್ಯ ರಸ್ತೆ ಹೊಂಡ ಗುಂಡಿಗಳಿಂದ ಹಾಳಾಗಿದೆ. ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್‌ವರೆಗಿನ ವಾರ್ಡ್‌ಗಳಿಗೆ ಚುನಾಯಿತರಾದ ಪುರಸಭಾ ಸದಸ್ಯರು ತಮ್ಮ ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ. ಶಾಸಕರು ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿಲ್ಲ. ಬಿ.ಸಿ.ರೋಡು ಮುಖ್ಯವೃತ್ತದಿಂದ ಒಳಗೆ ಬಂದು ಗೂಡಿನಬಳಿ, ಪಾಣೆಮಂಗಳೂರು ಪೇಟೆಯಾಗಿ ಮೆಲ್ಕಾರ್‌ವರೆಗೆ ಬರುವ ರಸ್ತೆಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಜತೆಗೆ ಪಾಣೆಮಂಗಳೂರು ಪ್ರದೇಶಕ್ಕೆ ಸಾರಿಗೆ ಸಂಪರ್ಕ ಹಾಗೂ ಸಂಚಾರಕ್ಕೆ ಯೋಗ್ಯವಾದ ಸೇತುವೆ ನಿರ್ಮಾಣ ಮಾಡಬೇಕು. ಪಿ.ಎಂ.ಹಾಮದ್ ಬಾವಾ ಬಂಟ್ವಾಳ ಭೂನ್ಯಾಯ ಮಂಡಳಿ ಮಾಜಿ ಸದಸ್ಯ