

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸ್ವಸಹಾಯ ಸಂಘಗಳಿಗೆ 2 ಕೋಟಿ 32 ಲಕ್ಷ ರೂ.ಸಾಲ ನೀಡಿದೆ. 2019ರಿಂದ ಸ್ವಸಹಾಯ ಸಂಘದ ಸದಸ್ಯರಿಗೆ, ಗ್ರಾಹಕರಿಗೆ ವೈದ್ಯಕೀಯ ನೆರವು, ವಿದ್ಯಾಭ್ಯಾಸದ ನೆರವು, ಶೌಚಗೃಹ ನೆರವು, ಮನೆ ಕಟ್ಟುವವರಿಗೆ ಧನಸಹಾಯವನ್ನು ವಿಶೇಷ ಸೇವಾ ಮನೋಭಾವನೆ ಇಟ್ಟುಕೊಂಡು ನೀಡಿ ಲಾಭಾಂಶದಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಹೇಳಿದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಭಾನುವಾರ ಸಂಘದ 2024-25ನೇ ಸಾಲಿನ 11ನೇ ವರ್ಷದ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಈ ಬಾರಿ ಪುರಸಭೆ ಮುಂಬಾಗದ ಫಾರ್ಚೂನರ್ ಬಿಲ್ಡಿಂಗ್‌ನಲ್ಲಿ 1 ಕೋಟಿ ರೂ. ವೆಚ್ಚದ ಸ್ವಂತ ಕಟ್ಟಡ ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಸ್ವಂತ ಕಟ್ಟಡಕ್ಕೆ ಸಹಕಾರಿ ಸಂಘ ಸ್ಥಳಾಂತರಗೊಳ್ಳಲಿದೆ ಎಂದರು.
ಶಾಖಾಧಿಕಾರಿ ಯು.ಆರ್.ಮಧ್ಯಸ್ಥ ವರದಿ ವಾಚಿಸಿದರು. ನಿರ್ದೇಶಕ ರಮೇಶ್ ಎಸ್.ಶೆಟ್ಟಿ 2023-24ನೇ ಸಾಲಿನ ಮಹಾಸಭೆಯ ನಡಾವಳಿ ಮಂಡಿಸಿದರು. ಗಣೇಶ್ 2024-25ನೇ ಸಾಲಿನ ಪರಿಶೋಧಿತ ಲೆಕ್ಕಪತ್ರ ವಿವರಿಸಿದರು. ಬಜೆಟ್‌ಗಿಂತ ಜಾಸ್ತಿಯಾದ ಖರ್ಚಿನ ಮಂಜೂರಾತಿ ವರದಿ ಸ್ವಾತಿ ವಾಚಿಸಿದರು. ಲಾಭಾಂಶ ವಿಂಗಡಣೆಯನ್ನು ರಾಜೇಂದ್ರ, ಶರತ್ ಜೆ.ಶೆಟ್ಟಿ 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಲೆಕ್ಕ ಪರಿಶೋಧನೆಯ ಪಾಲನಾ ವರದಿ ವಾಚಿಸಿದರು. ನಿರ್ದೇಶಕ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಎಸ್.ಶೆಟ್ಟಿ ಸ್ವಾಗತಿಸಿದರು. ಉಷಾ ಭಂಡಾರಿ ವಂದಿಸಿದರು.
ವಿದ್ಯಾರ್ಥಿವೇತನ ವಿತರಣೆ
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅತಿಹೆಚ್ಚು ಪಿಗ್ಮಿ ಸಂಗ್ರಹಿಸಿದ ದಿನೇಶ್ ಪೂಜಾರಿ, ಉತ್ತಮ ಗ್ರಾಹಕರು, ಸ್ವಸಹಾಯ ತಂಡಗಳಲ್ಲಿ ಎ ಗ್ರೇಡ್ ಪಡೆದುಕೊಂಡಿರುವ ಸ್ವಸಹಾಯ ತಂಡದ ಅಧ್ಯಕ್ಷರು, ಕಾರ್ಯದರ್ಶಿಯನ್ನು ಗೌರವಿಸಲಾಯಿತು.