

ಮಂಡ್ಯ: ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದವರು ಮಾರ್ಗಮಧ್ಯೆ ಅಪಘಾತಕ್ಕೀಡಾಗಿದ್ದಾರೆ. 12 ಜೆಡಿಎಸ್ ಕಾರ್ಯಕರ್ತರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಿನ್ನೆ(ಸೋಮವಾರ) ರಾತ್ರಿ ಪಂಚರತ್ನ ರಥಯಾತ್ರೆಯ ಸಮಾವೇಶ ಇತ್ತು. ಈ ಕಾರ್ಯಕ್ರಮಕ್ಕೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಗರುಡಾಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಆಟೋ ಮತ್ತು ಬೈಕ್ಗಳಲ್ಲಿ ಆಗಮಿಸಿದ್ದರು.
ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ಹೋಗುವಾಗ ಆಟೋ ಮತ್ತು ಕಾರು ಡಿಕ್ಕಿಯಾಗಿದ್ದು, ಆಟೋ ಮಗುಚಿ ಬಿದ್ದಿದೆ. ಆಟೋ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ 10 ಜನರಿಗೆ ಗಾಯಗಳಾದರೆ, ಆಟೋ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಇವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ವಿಡಿಯೋ ಕಾಲ್ ಮೂಲಕ ಗಾಯಾಳುಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಆರೋಗ್ಯ ವಿಚಾರಿಸಿದರು. ಇಂದು(ಮಂಗಳವಾರ) ಬೆಳಗ್ಗೆ 8.30ಕ್ಕೆ ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಎಚ್ಡಿಕೆ ಮತ್ತು ಶಾಸಕ ಸುರೇಶ್ ಗೌಡ ಭೇಟಿ ನೀಡಲಿದ್ದಾರೆ.