

ಹುಬ್ಬಳ್ಳಿ: ಬಡ ಕುಟುಂಬದ ಪ್ರತಿಭಾವಂತ ನೂರು ಮಕ್ಕಳಿಗೆ ಉತ್ತಮ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಪ್ರತಿ ವರ್ಷ ತೆಗೆದುಕೊಳ್ಳುವುದಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಇಲ್ಲಿಯ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಧಾರವಾಡ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಇದನ್ನು ಪ್ರತಿ ವರ್ಷ ಮಾಡುವ ಆಶಯ ಇದೆ. ಇದರೊಂದಿಗೆ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಉಚಿತ ಶಿಕ್ಷಣದ ಯೋಜನೆ ಘೋಷಿಸಲಾಗಿದೆ ಎಂದರು.
ಜಮಖಂಡಿ ಅಲಗೂರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದ ಜನರು ಬಡವರು, ಅವರ ಜೀವನ ಸುಂದರವಾಗಬೇಕಾದರೆ ಒಂದಿಷ್ಟು ಸಹಾಯ ಅಗತ್ಯ. ಇದೀಗ ಪುರಸ್ಕಾರ ನೀಡುತ್ತಿರುವುದು ಪ್ರೇರಣಾದಾಯಕವಾಗಿದೆ. ಇದನ್ನು ಬಳಸಿಕೊಂಡು ಮಕ್ಕಳು ವಿದ್ಯಾ ಪಾರಂಗತರಾಗಿ ಬೆಳೆಯಬೇಕು ಎಂದರು.
ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಪ್ರತಿವರ್ಷ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಸಮಾಜದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಮಕ್ಕಳು ಸಹ ಉನ್ನತ ವ್ಯಾಸಂಗ ಮಾಡಿ ನಾಗರಿಕ ಸೇವಾ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಪುರಸ್ಕಾರದ ಜತೆಗೆ ಪ್ರತಿ ಆರು ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿ ನೀಡಲು ಯೋಜಿಸಲಾಗಿದೆ. ಒಟ್ಟಾರೆ ಸಮಾಜದ ಮಕ್ಕಳು ಉತ್ತಮ ಭಾವಿ ಪ್ರಜೆಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಗಣತಿ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದು, ಜಾತಿಯನ್ನು ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು ಎಂದು ಸಲಹೆ ನೀಡಿದರು.
ಕಿತ್ತೂರ ಪ್ರೌಢಶಾಲೆಯ ಮಹೇಶ ಚೆನ್ನಂಗಿ ಅವರು ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷ ಡಾ. ಮೋಹನ ನುಚ್ಚಿ ಅಧ್ಯಕ್ಷತೆ ವಹಿಸಿದ್ದರು.
ಸಾಧಕರು ಹಾಗೂ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಗಿರೀಶ ನಲವಡಿ, ರಮೇಶ ಪಾಟೀಲ, ನಾಗರಾಜ ಯಲಿಗಾರ, ವಿಶ್ರಾಂತ ಕುಲಪತಿ ಡಾ. ಹೊಸಮನಿ ಎನ್.ಬಿ, ಪಕ್ಷಿ ತಜ್ಞ ಪ್ರಕಾಶಗೌಡ ಪಾಟೀಲ ಹಾಗೂ ಇತರರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ರಾಜಶೇಖರ ಕರಕಣ್ಣವರ, ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಕೆಎಲ್ಇ ತಾಂತ್ರಿಕ ವಿವಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪಾಟೀಲ, ವಸಂತಾ ಹುಲ್ಲತ್ತಿ, ರೇಣುಕಾ ಸಿರಗಂಬಿ, ತಾಲೂಕು ಅಧ್ಯಕ್ಷ ಸುರೇಶ ಲಿಂಬಿಕಾಯಿ, ಡಿ.ಬಿ. ಬಾರಿಕಾಯಿ, ಇತರರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಪಾಟೀಲ ಸ್ವಾಗತಿಸಿದರು. ಸುಧಾ ಕಬ್ಬೂರ ಪ್ರಾರ್ಥನೆ ಹಾಡಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಹುಬ್ಬಳ್ಳಿ ತಾಲೂಕು ಟಕದ ಕಾರ್ಯದರ್ಶಿ ಡಾ. ಶಿವಯೋಗಪ್ಪ ಯಮ್ಮಿ ಕಾರ್ಯಕ್ರಮ ನಿರೂಪಿಸಿದರು.