

ಉಳ್ಳಾಲ: ತಾಲೂಕುಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಗುರುವಾರ ದೇರಳಕಟ್ಟೆ ಬೆಳ್ಮ ಗ್ರಾ.ಪಂ. ಕಟ್ಟಡದಲ್ಲಿರುವ ಉಳ್ಳಾಲ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆ ಅನುಷ್ಠಾನದ ಪ್ರಗತಿ ಕುರಿತು ಚರ್ಚೆ ನಡೆಯಿತು. ಯುವನಿಧಿ ಯೋಜನೆಯಡಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ನೊಂದಣಿಗೆ ಉದ್ಯೋಗ ಮಾಹಿತಿ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.
ಶಕ್ತಿ ಯೋಜನೆಯಡಿ ಇಲಾಖೆಗೆ ಬೇಡಿಕೆ ಹಾಗೂ ಆದಾಯದಲ್ಲಿ ಪ್ರಗತಿ ಕಂಡಿದೆ ಎಂದು ಇಲಾಖಾ ಮುಖ್ಯಸ್ಥರು ತಿಳಿಸಿದರು. ಗೃಹಲಕ್ಷ್ಮೀ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಲಾಖಾ ಮುಖ್ಯಸ್ಥರು ಪ್ರಗತಿಯ ಮಾಹಿತಿ ಮಂಡಿಸಿದರು.
ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ರಫೀಕ್ ಅಂಬ್ಲಮೊಗರು ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಗುರುದತ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.