

ಅನೇಕ ಜನರು ತಮ್ಮ ಭವಿಷ್ಯ (prediction)ವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯ (Astrology)ದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರ (Palmistry ) ವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.
ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ನಕ್ಷತ್ರದ ಆಕಾರವೂ ಕೂಡ ಇರುತ್ತದೆ. ಅಂಗೈನಲ್ಲಿ ನಕ್ಷತ್ರದ ಚಿಹ್ನೆ ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.
ನಿಮ್ಮ ಅಂಗೈನಲ್ಲಿ ಅನೇಕ ಕಡೆಗಳಲ್ಲಿ ನಕ್ಷತ್ರ ಚಿಹ್ನೆಯನ್ನು ಗಮನಿಸಬಹುದು. ಆದರೆ, ಈ ನಕ್ಷತ್ರ ಚಿಹ್ನೆ ಕೆಲವು ನಿರ್ಧಿಷ್ಟ ಸ್ಥಳಗಳಲ್ಲಿ ಇದ್ದರೆ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ನಕ್ಷತ್ರ ಚಿಹ್ನೆಯು ಸೂರ್ಯ ಪರ್ವತದ ಮೇಲೆ ಕಂಡುಬಂದರೆ, ಅದನ್ನು ಮಂಗಳಕರ ಮತ್ತು ಅಪರೂಪವೆಂದು ಪರಿಗಣಿಸಲಾಗುತ್ತದೆ.
ಕನಿಷ್ಠ 5 ಸಾಲುಗಳನ್ನು ಹೊಂದಿರುವ ನಕ್ಷತ್ರ ಚಿಹ್ನೆಯು ( Palmistry ) ತುಂಬಾ ವಿರಳವಾಗಿ ಕಂಡುಬರುತ್ತದೆ. ಈ ನಕ್ಷತ್ರ ಚಿಹ್ನೆಯನ್ನು ಹೊಂದಿರುವ ಜನರು ಅನಿರೀಕ್ಷಿತ ಹೆಸರು, ಖ್ಯಾತಿ, ಯಶಸ್ಸು ಮತ್ತು ಸಂಪತ್ತನ್ನು ಪಡೆಯುತ್ತಾರೆ. ಈ ವ್ಯಕ್ತಿಗಳು ಕಲಾತ್ಮಕ ಗುಣಗಳನ್ನು ಹೊಂದಿದ್ದಾರೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೂ ಫಲಿತಾಂಶಗಳು ಸ್ವಲ್ಪ ನಿಧಾನವಾಗಬಹುದು.
ಬುಧ ರೇಖೆಯಲ್ಲಿ "ದ್ವೀಪ"ದೊಂದಿಗೆ "ನಕ್ಷತ್ರ" ಚಿಹ್ನೆ ಕಾಣಿಸಿಕೊಂಡರೆ, ದುರ್ಬಲವಾದ ಆರೋಗ್ಯ ಮತ್ತು ದಿವಾಳಿತನದ ಸೂಚನೆಯಾಗಿದೆ. ಇಂತಹ ವ್ಯಕ್ತಿಯು ಹಣವನ್ನು ಉಳಿಸಲು ಅಥವಾ ಸಂಪತ್ತನ್ನು ನಿರ್ಮಿಸಲು ಕಷ್ಟಪಡುತ್ತಾನೆ. ಗಳಿಸುವುದಕ್ಕಿಂತ ವೇಗವಾಗಿ ಖರ್ಚು ಮಾಡುತ್ತಾರೆ. ಇನ್ನು ಲೈಫ್ ಲೈನ್ ಮಧ್ಯದಲ್ಲಿ ನಕ್ಷತ್ರ ಚಿಹ್ನೆ ಕಾಣಿಸಿಕೊಂಡರೆ, ವ್ಯಕ್ತಿಯು ಮಧ್ಯವಯಸ್ಕನಾಗಿದ್ದಾಗ ಅಂದರೆ 40 ವರ್ಷ ವಯಸ್ಸಿನವನಾಗಿದ್ದಾಗ ವಿಪತ್ತು ಸಂಭವಿಸಬಹುದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ನೀವು ಯಶಸ್ವಿಯಾಗಿ ಮಧ್ಯವಯಸ್ಸನ್ನು ದಾಟಿದರೆ, ನೀವು ಆನಂದದಾಯಕ ನಿವೃತ್ತಿ ಮತ್ತು ವೃದ್ಧಾಪ್ಯವನ್ನು ಹೊಂದಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.