ಉಡುಪಿ ಜಿಲ್ಲಾದ್ಯಂತ ಕ್ರೈಸ್ತರಿಂದ ಪಾಮ್​ ಸಂಡೆ ಆಚರಣೆ

Paam 1
Published on

* ಶ್ರದ್ಧಾ ಭಕ್ತಿಯ ಸಂಕೇತವಾದ ಗರಿಗಳ ಭಾನುವಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಯೇಸು ಸ್ವಾಮಿ ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ಉಡುಪಿ ಜಿಲ್ಲಾದ್ಯಂತ ಕ್ರೈಸ್ತ ಸಮುದಾಯದವರು ಏ.13ರಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಗರಿಗಳ ಭಾನುವಾರ (ಪಾಮ್​ ಸಂಡೆ) ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ವಂ. ಡಾ. ಜೆರಾಲ್ಡ್​ ಐಸಾಕ್​ ಲೋಬೊ ಅವರು ಕುಂದಾಪುರ ತಾಲೂಕಿನ ಬಸ್ರೂರು ಸಂತ ಫಿಲಿಪ್​ ನೆರಿ ಚರ್ಚ್​ನಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನದಲ್ಲಿ ಪಾಲ್ಗೊಂಡು ಗರಿಗಳಿಗೆ ಆಶೀರ್ವದಿಸಿದರು. ಬಳಿಕ ಬಲಿಪೂಜೆಯಲ್ಲಿ ಸಂದೇಶ ನೀಡಿದರು. ಚರ್ಚ್​ನ ಪ್ರಧಾನ ಧರ್ಮಗುರು ವಂ. ರೋಯ್​ ಲೋಬೊ, ಸಹಾಯಕ ಧರ್ಮಗುರು ವಂ.ವಿಲ್ಸನ್​ ಸಲ್ಡಾನಾ ಉಪಸ್ಥಿತರಿದ್ದರು.

ಗರಿಗಳೊಂದಿಗೆ ಮೆರವಣಿಗೆ

Paam 2
ಉಡುಪಿ ಜಿಲ್ಲೆಯ ಎಲ್ಲ ಚರ್ಚ್​ಗಳಲ್ಲಿ ಕ್ರೈಸ್ತರು ಬೆಳಗ್ಗೆ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿ ಹಿಡಿದುಕೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಚರ್ಚ್​ಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು.

ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರದ ಮಿಲಾಗ್ರಿಸ್​ ಕ್ಯಾಥೆಡ್ರಲ್​ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಅವರು ಧಾರ್ಮಿಕ ವಿಧಿ-ವಿಧಾನದ ನೇತೃತ್ವ ವಹಿಸಿದ್ದರು.

ಪವಿತ್ರ ಸಪ್ತಾಹ

ಪಾಮ್​ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸುಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್​ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ್ದರು. ಅದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಯೇಸು ಪುನರುತ್ಥಾನದ ಈಸ್ಟರ್​ ಹಬ್ಬ

ಕ್ರೈಸ್ತ ಸಮುದಾಯಕ್ಕೆ ಪವಿತ್ರ ಸಪ್ತಾಹವು ಅತಿ ಮಹತ್ವದ್ದಾಗಿದೆ. ಗುರುವಾರದಂದು ಯೇಸುಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದರೆ, ಯೇಸುಕ್ರಿಸ್ತರ ಮರಣದ ದಿನವಾದ ಶುಕ್ರವಾರ ಗುಡ್​ ಫ್ರೈಡೆ ಆಚರಿಸಿ ಇಡೀ ದಿನ ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್​ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್​ ಹಬ್ಬ ಆಚರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net