ಪಾಕಿಸ್ತಾನದ ಮಿಯಾನ್‌ವಾಲಿ ವಾಯುನೆಲೆ ಮೇಲೆ ಉಗ್ರರ ದಾಳಿ, 3 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

pak (1)
Published on

ಇಸ್ಲಾಮಾಬಾದ್: ಪಾಕಿಸ್ತಾನದ ವಾಯುಸೇನೆ ನೆಲೆಯ ಮೇಲೆ ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ. ಮಿಯಾನ್‌ವಾಲಿ ವಾಯುನೆಲೆ (ವಾಯುಪಡೆ ತರಬೇತಿ ನೆಲೆ) ಮೇಲೆ ಶನಿವಾರ ಬೆಳಗ್ಗೆ ಆರು ಉಗ್ರರು ದಾಳಿ ನಡೆಸಿದ್ದಾರೆ. ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಗೆ ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಆರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನುಗ್ಗಿದ್ದಾರೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯುತ್ತಿದ್ದು, ಅದರ ವಿಡಿಯೋ ಕೂಡ ಹೊರಬಿದ್ದಿದೆ. ವಾಯುನೆಲೆಯೊಳಗೆ ಭಾರಿ ಜ್ವಾಲೆ ಕಾಣಿಸಿಕೊಂಡಿದೆ. ಈ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಎಂಬ ಸಂಘಟನೆ ಹೊತ್ತುಕೊಂಡಿದೆ.  

ಪಾಕಿಸ್ತಾನಿ ಸೇನೆಯ ಹೇಳಿಕೆ
ಈ ದಾಳಿಯ ಬಗ್ಗೆ ಪಾಕಿಸ್ತಾನ ಸೇನೆ (ISPR) ಹೇಳಿಕೆ ನೀಡಿದ್ದು, 'ನವೆಂಬರ್ 4, 2023 ರ ಮುಂಜಾನೆ ಪಾಕಿಸ್ತಾನದ ವಾಯುಪಡೆಯ ಮಿಯಾನ್‌ವಾಲಿ ತರಬೇತಿ ವಾಯುನೆಲೆಯಲ್ಲಿ ಭಯೋತ್ಪಾದಕರು ದಾಳಿಗೆ ಯತ್ನಿಸಿದರು. ಆದರೆ ಅವರು ನೆಲೆ ಪ್ರವೇಶಿಸುವ ಮುನ್ನವೇ ಭದ್ರತಾ ಸಿಬ್ಬಂದಿ ಅಸಾಧಾರಣ ಧೈರ್ಯ ಪ್ರದರ್ಶಿಸಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಮೂವರನ್ನು ಸುತ್ತುವರಿಯಲಾಗಿದೆ ಎಂದು ಪಾಕ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. 3 ಭಯೋತ್ಪಾದಕರನ್ನು ಅವರು ನೆಲೆಯನ್ನು ಪ್ರವೇಶಿಸುವ ಮೊದಲು ಕೊಂದರು, ಉಳಿದ 3 ಭಯೋತ್ಪಾದಕರನ್ನು ಸೈನಿಕರು ಸುತ್ತುವರೆದರು.

ಜವಾಬ್ದಾರಿ ವಹಿಸಿಕೊಂಡ ಟಿಜೆಪಿ
ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ವಕ್ತಾರ ಮುಲ್ಲಾ ಮುಹಮ್ಮದ್ ಖಾಸಿಮ್ ಅವರು ಮಿಯಾನ್‌ವಾಲಿ ವಾಯುನೆಲೆ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಮತ್ತು ಹಲವಾರು ಆತ್ಮಹತ್ಯಾ ಬಾಂಬರ್‌ಗಳೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸ್ಥಳೀಯರು ದಾಳಿಯನ್ನು ದೃಢಪಡಿಸುವ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಭಯೋತ್ಪಾದಕ ಗುಂಪು ತಾನು ನೆಲೆಯಲ್ಲಿದ್ದ ಟ್ಯಾಂಕ್ ಅನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. 

ಏಣಿಗಳನ್ನು ಬಳಸಿದ ಭಯೋತ್ಪಾದಕರು
ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಯ ಬೇಲಿಯಿಂದ ಸುತ್ತುವರಿದ ಗೋಡೆಗಳನ್ನು ದಾಟಲು ಭಯೋತ್ಪಾದಕರು ಏಣಿಗಳನ್ನು ಬಳಸಿದರು. ನಂತರ ಒಳಗೆ ಪ್ರವೇಶಿಸಿ ದಾಳಿಯನ್ನು ಪ್ರಾರಂಭಿಸಿ, ಹಲವಾರು ಬಾಂಬ್ ಸ್ಫೋಟಗಳನ್ನು ಸಹ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯಾ ಬಾಂಬರ್‌ಗಳ ವಿರುದ್ಧ ಪಾಕಿಸ್ತಾನಿ ಸೇನೆಯ ಕಾರ್ಯಾಚರಣೆ ನಡೆಯುತ್ತಿದ್ದು, ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆ
ಇಮ್ರಾನ್ ಖಾನ್ ಅವರ ಬಂಧನದ ನಂತರ ಪಕ್ಷದ ಬೆಂಬಲಿಗರು ದಾಳಿ ಮಾಡಿದ ಅದೇ ವಾಯುನೆಲೆ ಮಿಯಾನ್ವಾಲಿ. ಅಷ್ಟೇ ಅಲ್ಲ, ಪ್ರತಿಭಟನಾಕಾರರು ವಾಯುನೆಲೆಯ ಹೊರಗಿನ ವಿಮಾನದ ರಚನೆಗೆ ಬೆಂಕಿ ಹಚ್ಚಿದರು.

ಇದಕ್ಕೂ ಮುನ್ನ ಶುಕ್ರವಾರ ದಾರ್‌ನಲ್ಲಿ ಭದ್ರತಾ ಪಡೆಗಳನ್ನು ಸಾಗಿಸುತ್ತಿದ್ದ ಎರಡು ವಾಹನಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ ಕನಿಷ್ಠ 14 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಭದ್ರತಾ ಬೆಂಗಾವಲು ಪಡೆ ಗ್ವಾದರ್ ಜಿಲ್ಲೆಯ ಪಾಸ್ನಿಯಿಂದ ಒರ್ಮಾರಾ ಕಡೆಗೆ ಚಲಿಸುತ್ತಿದ್ದಾಗ ಈ ದುರದೃಷ್ಟಕರ ಘಟನೆ ಸಂಭವಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ.

ಮೂರು ಯುದ್ಧ ವಿಮಾನಗಳು ಮತ್ತು ಇಂಧನ ಟ್ಯಾಂಕರ್ ನಾಶ
ದಾಳಿಯಲ್ಲಿ ಭಯೋತ್ಪಾದಕರು ಮೂರು ಯುದ್ಧ ವಿಮಾನಗಳು ಮತ್ತು ಇಂಧನ ಟ್ಯಾಂಕರ್ ಅನ್ನು ನಾಶಪಡಿಸಿದ್ದಾರೆ. ಪ್ರದೇಶವನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.

ಹಲವಾರು ಪಾಕಿಸ್ತಾನಿ ಪತ್ರಕರ್ತರ ವರದಿಗಳು ಮತ್ತು ವಿಡಿಯೋಗಳು ಸಹ ರಿವೀಲ್ ಆಗಿದ್ದು, ಅಲ್ಲಿ ಅಪರಿಚಿತ ಬಂದೂಕುಧಾರಿಗಳು ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನಿ ವಾಯುಪಡೆಯ ತರಬೇತಿ ನೆಲೆಯ ಮೇಲೆ ದಾಳಿ ಮಾಡಿದ್ದಾರೆ. ಇದರಿಂದಾಗಿ ಸಾವುನೋವುಗಳು ಸಂಭವಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net