

ನವದೆಹಲಿ: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜತೆಗಿನ ವಿವಾಹ ವಿಚ್ಛೇದನದ ವಂದತಿಗಳಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲಿಕ್ ತೆರೆ ಎಳೆದಿದ್ದಾರೆ. ಪಾಕ್ನ ಕಿರುತೆರೆ ನಟಿ ಸನಾ ಜಾವೇದ್ ಅವರೊಂದಿಗೆ ಎರಡನೇ ವಿವಾಹವಾಗಿರುವ ಕ್ಷಣಗಳನ್ನು ಶೋಯಿಬ್ ಮಲಿಕ್ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಾನಿಯಾ ಮಿರ್ಜಾ ಜತೆಗಿನ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.
2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಶೋಯಿಬ್ ಮಲಿಕ್ ದಂಪತಿಗೆ 2018ರಲ್ಲಿ ಗಂಡು ಜನಿಸಿತ್ತು. 2022ರಿಂದಲೂ ಇವರಿಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿ ವಾಸಿಸುತ್ತಿದ್ದರು.ಅಂದಿನಿಂದ ಇವರಿಬ್ಬರ ನಡುವೆ ವಿಚ್ಛೇದನ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜತೆಗೆ ಇವರಿಬ್ಬರೂ ಕಳೆದ ಎರಡು ವರ್ಷಗಳಲ್ಲಿ ವಿರಳವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಕೆಲ ದಿನಗಳ ಹಿಂದಷ್ಟೇ ಮಲಿಕ್ ಇನ್ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ಅವರನ್ನು ಅನ್ಫಾಲೋ ಮಾಡಿದ್ದರು. ಶೋಯಿಬ್ ಮಲಿಕ್ ವಿವಾಹದ ಬಗ್ಗೆ ಸಾನಿಯಾ ಮಿರ್ಜಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕೆಲವು ದಿನಗಳ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥ ಹೊಂದಿರುವ ಪೋಸ್ಟ್ ಅನ್ನು ಸಾನಿಯಾ ಹಂಚಿಕೊಂಡಿದ್ದರು.
ಸನಾಗೂ 2ನೇ ವಿವಾಹ: ಪಾಕಿಸ್ತಾನದ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿರುವ ಸನಾ ಜಾವೇದ್, 2020ರಲ್ಲಿ ಗಾಯಕ ಉಮೈರ್ ಜೈಸ್ವಾಲ್ ಅವರನ್ನು ವಿವಾಹವಾಗಿದ್ದರು. ಎರಡು ತಿಂಗಳ ಹಿಂದೆ ಈ ಜೋಡಿ ವಿಚ್ಛೇದನದೊಂದಿಗೆ ಪರಸ್ಪರ ಬೇರ್ಪಟ್ಟಿದ್ದರು. ಶೋಯಿಬ್ ಮಲಿಕ್ ಜತಗಿನ ವಿವಾಹದ ಬಳಿಕ ಸನಾ ಸಾಮಾಜಿಕ ಜಾಲತಾಣದ ಬಯೋದಲ್ಲಿ ಸನಾ ಶೋಯಿಬ್ ಮಲಿಕ್ ಎಂದು ಬರೆದುಕೊಂಡಿದ್ದಾರೆ.
ಸಾನಿಯಾರಿಂದಲೇ ವಿಚ್ಛೇದನ: ಶೋಯಿಬ್ ಮಲಿಕ್ ಮೂರನೇ ಬಾರಿಗೆ ವಿವಾಹವಾಗಿದ್ದಾರೆ ಎಂಬ ಸುದ್ದಿ ವೈರಲ್ ಆದ ಬಳಿಕ ಸಾನಿಯಾ ತಂದೆ
ನಿಯಾ ತಂದೆ ಇಮ್ರಾನ್ ಮಿರ್ಜಾ ಪ್ರತಿಕ್ರಿಯಿಸಿದ್ದು, "ಖುಲಾ'ಎಂದು ಹೇಳುವ ಮೂಲಕ ಸಾನಿಯಾ ಮಿರ್ಜಾ, ಅವರ ಪತಿ(ಶೋಯಿಬ್)ಗೆ ವಿಚ್ಛೇದನ ನೀಡಿದ್ದಾರೆ. ಕುರಾನ್ ಪ್ರಕಾರ ಖುಲಾ ಎಂದರೆ "ಮುಸ್ಲಿಂ ಮಹಿಳೆಗೆ ಏಕಪಯವಾಗಿ ತನ್ನ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಸೂಚಿಸುತ್ತದೆ' ಎಂದು ಸ್ಪಷ್ಟಪಡಿಸಿದ್ದು, ಸಾನಿಯಾ ಮಿರ್ಜಾ ಅವರೇ ವಿಚ್ಛೇದನದ ನಿರ್ಧಾರ ತೆಗೆದುಕೊಂಡಿದ್ದಾರೆ. ಕುರಾನ್ನಲ್ಲಿ ತಲಾಖ್ ಮತ್ತು ಖುಲಾ ನಡುವೆ ವಿಭಿನ್ನ ವ್ಯತ್ಯಾಸಗಳಿದ್ದು, ಗಂಡ, ಹೆಂಡತಿಯೊಂದಿಗೆ ಸಂಬಂಧ ಕಳೆದುಕೊಳ್ಳಲು ಇಚ್ಛಿಸಿದರೆ ಅದನ್ನು ತಲಾಖ್ ಎಂದು ಕರೆಯಲಾಗುತ್ತದೆ. ಆದರೆ ಪತ್ನಿಯೇ ಗಂಡನ ಜತೆಗೆ ಸಂಬಂಧ ತ್ಯಜಿಸಲು ಮುಂದಾದರೆ ಅದನ್ನು ಖುಲಾ ಎನ್ನಲಾಗುತ್ತದೆ.
ಶೋಯಿಬ್ಗೆ 3ನೇ ಮದುವೆ ?: ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೊದಲು, ಆಯೇಶಾ ಸಿದ್ದಿಕಿ ಎಂಬ ಮಹಿಳೆ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ಈಗಾಗಲೇ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದರು. ಇದರೊಂದಿಗೆ ಶೋಯಿಬ್ ಜೀವನ ಚರ್ಚೆಯ ಪ್ರಮುಖ ಅಂಶವಾಗಿ ನಂತರ ದೊಡ್ಡ ವಿವಾದವಾಯಿತು. 2002ರಲ್ಲಿ ತಾವು ವಿವಾಹವಾಗಿರುವುದಾಗಿ ವಿಡಿಯೊ ತುಣುಕುಗಳನ್ನು ಹಂಚಿಕೊಂಡ ಆಯೇಷಾ, ನಂತರ ಶೋಯಿಬ್ ವಿರುದ್ಧ ಪೊಲೀಸ್ಗೆ ದೂರು ನೀಡಿ, ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾಳನ್ನು ಮದುವೆಯಾಗಲು ಹೊರಟಿದ್ದಾರೆ ಎಂದು ಆರೋಪಿಸಿದರು. ಆರಂಭದಲ್ಲಿ ಆರೋಪವನ್ನು ನಿರಾಕರಿಸುತ್ತಲೇ ಇದ್ದ ಶೋಯಿಬ್ ಮಲಿಕ್
ಏಪ್ರಿಲ್ 2010ರಲ್ಲಿ ಸಾನಿಯಾ ಅವರನ್ನು ಮದುವೆಯಾಗುವ ಕೆಲವು ದಿನಗಳ ಮುನ್ನ ಮೊದಲ ಪತ್ನಿ ಆಯೇಶಾ ಸಿದ್ದಿಕ್ ಅವರಿಂದ ವಿಚ್ಛೇದನ ಪಡೆದರು ಎನ್ನಲಾಗಿದೆ. ಸಾನಿಯಾ ಮಿರ್ಜಾ ಅವರು ಶೋಯಿಬ್ ಮಲಿಕ್ ಅವರನ್ನು ಮದುವೆಯಾಗುವ ಮೊದಲು ಬಾಲ್ಯದ ಸ್ನೇಹಿತ ಸೊಹ್ರಾಬ್ ಮಿರ್ಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.