

ನ್ಯೂಯಾರ್ಕ್: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿತ್ತು. ಆ ಜಲಾಂತರ್ಗಾಮಿ ನೌಕೆಯಲ್ಲಿ ಹದಿಜರೆಯದ ಪೋರನೂ ಇದ್ದದ್ದು ಎಲ್ಲರಿಗೂ ಆಘಾತ ನೀಡಿತ್ತು. ಇದೀಗ ಆ ಬಾಲಕನ ತಾಯಿ ಬಿಬಿಸಿ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಆತ ನೀರಿನ ಆಳದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಲು ಮುಂದಾಗಿದ್ದ ಎಂದು ಹೇಳಿಕೆ ನೀಡಿದ್ದಾರೆ.
ಟೈಟಾನ್ ಹೆಸರಿನ ಜಲಾಂತರ್ಗಾಮಿ ನೌಕೆಯು ನೀರಿನ ಸೆಳೆತಕ್ಕೆ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ರಿಮೋಟ್ ಕಂಟ್ರೋಲ್ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.
ಈ ಬಗ್ಗೆ ಅಮೆರಿಕ ರೀರ್ ಅಡ್ಮಿರಲ್ ಜಾನ್ ಮೌಗರ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವಾಗ ಯುಎಸ್ ಕರಾವಳಿ ಪಡೆ ಮತ್ತು ಇಡೀ ಕಾರ್ಯಾಚರಣೆಯ ತಂಡದ ಪರವಾಗಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತಪಟ್ಟಿರುವ ಸುದ್ದಿಯನ್ನು ಈಗಾಗಲೇ ಅವರ ಕುಟುಂಬಗಳಿಗೆ ತಿಳಿಸಿರುವುದಾಗಿ ಹೇಳಿದರು.
ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಸಾವನ್ನಪ್ಪಿದ ಹದಿಹರೆಯದ ಬಾಲಕ ವಿಶ್ವ ದಾಖಲೆಯನ್ನು ಮುರಿಯಲು ಬಯಸಿದ್ದರಿಂದ ತನ್ನೊಂದಿಗೆ ರುಬಿಕ್ ಕ್ಯೂಬ್ ಅನ್ನು ತೆಗೆದುಕೊಂಡು ಹೋಗಿದ್ದ ಎಂದು ಅವನ ತಾಯಿ ಹೇಳಿದ್ದಾರೆ. “ಸಮುದ್ರದ ಮೇಲ್ಮೈಯಿಂದ 19,300 ಮೀಟರ್ ಆಳದಲ್ಲಿ ಈ ಒಗಟನ್ನು ಪರಿಹರಿಸಲು ಪ್ರಯತ್ನಿಸಲು ತನ್ನ 17 ವರ್ಷದ ಮಗ ಸುಲೇಮಾನ್ ತುಂಬಾ ಉತ್ಸುಕನಾಗಿದ್ದ” ಎಂದು ಕ್ರಿಸ್ಟಿನ್ ದಾವೂದ್ ಬಿಬಿಸಿಗೆ ತಿಳಿಸಿದರು.
ಈ ಮಧ್ಯೆ, ಉದ್ಯಮಿಯಾದ ಅವರ ತಂದೆ ಶಹಜಾದಾ, ಟೈಟಾನಿಕ್ ಅವಶೇಷಗಳನ್ನು ನೋಡುವ ನಿರೀಕ್ಷೆಯಲ್ಲಿ ಮಗುವಿನಂತೆ ತುಂಬಾ ಉತ್ಸುಕರಾಗಿದ್ದರು ಎನ್ನಲಾಗಿದೆ.
ಅವರು ಅದಾಗಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಬಾಲಕನ ತಂದೆ, ಆ ಕ್ಷಣವನ್ನು ಸೆರೆಹಿಡಿಯಲು ತಮ್ಮೊಂದಿಗೆ ಕ್ಯಾಮರಾವನ್ನೂ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ತನ್ನ ಮಗ ಪ್ರಸಿದ್ಧ ರೂಬಿಕ್ಸ್ ಕ್ಯೂಬ್ ಒಗಟನ್ನು ಎಷ್ಟು ಪ್ರೀತಿಸುತ್ತಿದ್ದನೆಂದರೆ, ಅವನು ಅದನ್ನು ಎಲ್ಲೆಡೆ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದ. ಅದಲ್ಲದೇ ಆತ ಕೇವಲ 12 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಪರಿಹರಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಿದ್ದ ಎಂದು ಕ್ರಿಸ್ಟೀನ್ ದಾವೂದ್ ಹೇಳಿದರು. (ಏಜೆನ್ಸೀಸ್)