

ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿದ್ದು ಗೊತ್ತೇ ಇದೆ. ಭಾನುವಾರ (ಜೂನ್ 09) ನ್ಯೂಯಾರ್ಕ್ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 6 ರನ್ಗಳಿಂದ ಸೋಲುಂಡಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಕೇವಲ 119 ರನ್ಗಳಿಗೆ ಆಲೌಟ್ ಆದರೆ, ಗುರಿ ಬೆನ್ನತ್ತಲು ಪಾಕ್ಗೆ ಸಾಧ್ಯವಾಗಲಿಲ್ಲ.
ತಮ್ಮ ತಂಡ ಸೋತರೆ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿ ಮುಂದಿನ ಪಂದ್ಯದಲ್ಲಿ ಯಾವುದೇ ತಪ್ಪು ಮಾಡಬೇಡಿ ಎಂದು ಮಾಜಿ ಕ್ರಿಕೆಟಿಗರು ಸಲಹೆ ನೀಡುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಅದನ್ನು ಬಿಟ್ಟು ಟೀಮ್ ಇಂಡಿಯಾ ಬೌಲರ್ ಅರ್ಷದೀಪ್ ಸಿಂಗ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಅರ್ಷದೀಪ್ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ್ದರು.
ಟಿವಿ ವಾಹಿನಿಯೊಂದರ ಪಂದ್ಯ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಮಲ್, ಈಗ ಏನಾದರೂ ಆಗಬಹುದು. ಕೊನೆಯ ಓವರ್ ಅನ್ನು ಅರ್ಷದೀಪ್ ಸಿಂಗ್ ಬೌಲ್ ಮಾಡುತ್ತಾರೆ. ಅವನು ಉತ್ತಮ ಲಯದಲ್ಲಿ ಕಾಣಿಸುತ್ತಿಲ್ಲ. 12 ಗಂಟೆಗೆ ಸಿಖ್ಖರನ್ನು (ಅರ್ಷದೀಪ್ ಸಿಂಗ್) ಬೌಲ್ಡ್ ಮಾಡಲಾಗಿದೆ ಎಂದು ವ್ಯಂಗ್ಯವಾಗಿ ನಕ್ಕರು.
ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಗಂಭೀರವಾಗಿ ಪ್ರತಿಕ್ರಿಯಿಸಿ, ಇಂತಹ ಕಾಮೆಂಟ್‌ಗಳನ್ನು ಮಾಡುವ ಮೊದಲು ಸಿಖ್ಖರ ಇತಿಹಾಸವನ್ನು ತಿಳಿದುಕೊಳ್ಳಿ. ನಿಮ್ಮ ತಾಯಿ ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ, ನಾವು (ಸಿಖ್ಖರು) ಅವರನ್ನು ಅವರ ಸೆರೆಯಿಂದ ರಕ್ಷಿಸಿದ್ದೇವೆ, ಆಗ ಸಮಯ ಸರಿಯಾಗಿ 12 ಗಂಟೆಗಳು. ನಾಚಿಕೆಯಾಗಬೇಕು ನಿಮಗೆ. ಸ್ವಲ್ಪ ಕೃತಜ್ಞತೆ ತೋರಿ ಎಂದು ಕಮ್ರಾನ್ ಅಕ್ಮಲ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಭಜ್ಜಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ, ಅಕ್ಮಲ್ ಕ್ಷಮೆಯಾಚಿಸಿದ್ದಾರೆ. ನನ್ನ ಕಾಮೆಂಟ್‌ಗಳಿಗಾಗಿ ನಾನು ವಿಷಾದಿಸುತ್ತೇನೆ. ನಾನು ಹರ್ಭಜನ್ ಸಿಂಗ್ ಮತ್ತು ಸಿಖ್ಖರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಅನುಚಿತ ಮತ್ತು ಅಗೌರವವಾಗಿತ್ತು. ಪ್ರಪಂಚದಾದ್ಯಂತದ ಸಿಖ್ಖರ ಬಗ್ಗೆ ನನಗೆ ತುಂಬಾ ಗೌರವವಿದೆ. ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಆ ಕಾಮೆಂಟ್‌ಗಳನ್ನು ಮಾಡಿಲ್ಲ. ನನ್ನನ್ನು ಕ್ಷಮಿಸಿ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್)