ಭಾರತದ ಜೊತೆ ನಡೆದ ಸಂಘರ್ಷದಲ್ಲಿ ಒಂದು ವಿಮಾನ ಮಾತ್ರ ಹಾನಿ ಎಂದ ಪಾಕಿಸ್ತಾನ್​​ | Islamabad

Islamabad
Published on

Islamabad: ಭಾರತದೊಂದಿಗಿನ ಮಿಲಿಟರಿ ಘರ್ಷಣೆಯ ಸಮಯದಲ್ಲಿ ತನ್ನ ಒಂದು ಯುದ್ಧ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ಪಾಕಿಸ್ತಾನ ಸೇನೆ ಭಾನುವಾರ (ಮೇ.11) ಒಪ್ಪಿಕೊಂಡಿದೆ.

ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದ ಮಿಲಿಟರಿ ದಾಳಿಯನ್ನು ಯಶಸ್ವಿಯಾಗಿ ತಡೆಯುವ ಮೂಲಕ ಹಲವಾರು ಪಾಕಿಸ್ತಾನಿ ಜೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಭಾರತ ಹೇಳಿಕೊಂಡ ಕೆಲವೇ ಗಂಟೆಗಳ ನಂತರ ಪಾಕ್​​ ಈ ರೀತಿಯ ಹೇಳಿಕೆ ನೀಡಿದೆ.

ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, "ಆಪರೇಷನ್ ಬನ್ಯನ್-ಉಮ್-ಮರ್ಸೂಸ್" (ಭಾರತದ ವಿರುದ್ಧ ಪಾಕ್​ ಸೇನಾ ಕಾರ್ಯಾಚರಣೆ)ನ ನಡವಳಿಕೆ ಮತ್ತು ತೀರ್ಮಾನದ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಪಾಕಿಸ್ತಾನದ "ಒಂದು ವಿಮಾನ ಮಾತ್ರ" "ಸ್ವಲ್ಪ ಹಾನಿಗೊಳಗಾಗಿದೆ" ಎಂದು ಚೌಧರಿ ಹೇಳಿದ್ದರೂ, ವಿಮಾನದ ಬಗ್ಗೆ ವಿವರಗಳನ್ನು ನೀಡಲಿಲ್ಲ.

ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದು, ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಗುಂಡಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಲು ನಿರ್ಧರಿಸಲಾಗಿದೆ. ಆದರೂ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನ ಸೇನೆಯು ಗಡಿಯಾಚೆಯಿಂದ ಗುಂಡಿನ ದಾಳಿ ನಡೆಸುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದೆ. ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net