ಭಾರತದಂತೆ ಪಾಕಿಸ್ತಾನದಲ್ಲೂ ತಬ್ಲಿಘಿ ಜಮಾತ್ ಆತಂಕ ಶುರು

Pak
Published on

ಇಸ್ಲಾಮಾಬಾದ್: ಭಾರತದಂತೆ ಪಾಕಿಸ್ತಾನದಲ್ಲೂ ತಬ್ಲಿಘಿ ಆತಂಕ ಶುರುವಾಗಿದೆ. ಕರೊನಾ ಹಾವಳಿ ನಡುವೆಯೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಯ್ವಿಂಡ್ ಮರ್ಕಜ್​ನಲ್ಲಿ ತಬ್ಲಿಘಿ ಜಮಾತ್ ಕಳೆದ ತಿಂಗಳು ವಾರ್ಷಿಕ ಸಮಾವೇಶ ನಡೆಸಿತ್ತು. ಪ್ರಾಂತೀಯ ಸರ್ಕಾರದ ವಿರೋಧದ ನಡುವೆಯೂ ಸಮಾವೇಶ ವ್ಯವಸ್ಥೆಗೊಳಿಸಿತ್ತು ಎಂದು ವರದಿಯಾಗಿದೆ. ಮಾರ್ಚ್ 10ರಂದು 80 ಸಾವಿರ ಸದಸ್ಯರು ಜಮಾಯಿಸಿದ್ದರು. ಕಾರ್ಯಕ್ರಮದಲ್ಲಿ ಒಟ್ಟಾರೆ ಎರಡೂವರೆ ಲಕ್ಷ ಜನರು ಭಾಗವಹಿಸಿದ್ದರು ಎಂದು ಜಮಾತ್ ಆಡಳಿತ ವರ್ಗ ಹೇಳಿಕೊಂಡಿದೆ.

40 ದೇಶಗಳಿಂದ ಆಗಮಿಸಿದ್ದ ಸುಮಾರು 3000 ಜನರು ಕೂಡ ವಾರ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೈರಸ್ ಉಲ್ಬಣಿಸಿದ್ದರಿಂದ ಪಾಕ್ ಸರ್ಕಾರ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಅವರವರ ದೇಶಗಳಿಗೆ ಮರಳಲು ಸಾಧ್ಯವಾಗದೆ ಪಾಕ್​ನಲ್ಲೇ ಉಳಿದುಕೊಂಡಿದ್ದಾರೆ. ಲಾಹೋರ್ ವಿಭಾಗೀಯ ಅಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಜಮಾತ್ ಆಡಳಿತ ಮಂಡಳಿಯೊಂದಿಗೆ ಸತತ ಸಮಾಲೋಚನೆ ನಡೆಸಿದ ನಂತರ ಆರು ದಿನಗಳ ಸಮಾವೇಶವನ್ನು ಮೂರು ದಿನಕ್ಕೆ ಇಳಿಸಲಾಗಿತ್ತು. ಮಲೇಷ್ಯಾದಲ್ಲಿ ಕೂಡ ಜಮಾತ್ ಟೀಕೆಗೆ ಒಳಗಾಗಿದೆ. ತಬ್ಲಿಘಿಯ ಅನೇಕ ಸದಸ್ಯರಿಗೆ ಕರೊನಾ ಪಾಸಿಟಿವ್ ವರದಿ ಬಂದಿದ್ದು ಕರೊನಾ ಪ್ರಕರಣಗಳು ಜಾಸ್ತಿಯಾಗಲು ಕಾರಣವಾಗಿರುವುದು ಟೀಕೆಗೆ ಪ್ರಮುಖ ಕಾರಣವಾಗಿದೆ.

ರಾಯ್​ ವಿಂಡ್​ ಲಾಕ್​ಡೌನ್

ಪಾಕಿಸ್ತಾನದಲ್ಲಿ ಇದುವರೆಗೆ 4196 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 60 ಜನರು ಮೃತಪಟ್ಟಿದ್ದಾರೆ. ಜಮಾತ್​ನ ನೂರಾರು ಸದಸ್ಯರ ಪರೀಕ್ಷೆ ಪಾಸಿಟಿವ್ ಬಂದಿದ್ದರಿಂದ ರಾಯ್ವಿಂಡ್ ಪಟ್ಟಣದಲ್ಲಿ ಸಂಪೂರ್ಣ ಲಾಖ್​ಡೌನ್ ವಿಧಿಸಲಾಗಿದೆ. ರಾಯ್ವಿಂಡ್ ನಗರದ ಜನಸಂಖ್ಯೆ ಸುಮಾರು ಎರಡು ಲಕ್ಷ. ಜಮಾತ್ ಸಮಾವೇಶಕ್ಕೆ ಹೋಗಿದ್ದ ಜನರಿರುವ ಪಂಜಾಬ್​ನ 36 ಜಿಲ್ಲೆಗಳಲ್ಲಿ 10,263 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ತಬ್ಲಿಘಿ ಜಮಾತ್​ನ ಒಟ್ಟು 539 ಸದಸ್ಯರಲ್ಲಿ ಕರೊನಾ ದೃಢಪಟ್ಟಿದ್ದು ಆ ಪೈಕಿ ರಾಯ್ವಿಂಡ್ ಮರ್ಕಜ್ ಸಮಾವೇಶಕ್ಕೆ ಹೋದವರು 404 ಮಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net