ನ್ಯೂಜಿಲೆಂಡ್ ವಿರುದ್ಧ ಫಾಲೋಆನ್ ತಪ್ಪಿಸಿಕೊಂಡ ಪಾಕಿಸ್ತಾನ

pak vs nz web
Published on

ಮೌಂಟ್ ಮೌಂಗನುಯಿ: ಆಲ್ರೌಂಡರ್ ಫಹೀಮ್ ಅಶ್ರಫ್​ (91) ಮತ್ತು ನಾಯಕ ಮೊಹಮದ್ ರಿಜ್ವಾನ್ (71) ಸಾಹಸದಿಂದ ಪಾಕಿಸ್ತಾನ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಫಾಲೋಆನ್‌ನಿಂದ ಪಾರಾಗಿದೆ. ಆದರೆ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಪಾಕ್, ಪಂದ್ಯದ ಉಳಿದೆರಡು ದಿನವೂ ಪ್ರತಿರೋಧ ತೋರಬೇಕಾಗಿದೆ.

ಸೋಮವಾರ 1 ವಿಕೆಟ್‌ಗೆ 30 ರನ್‌ನಿಂದ 3ನೇ ದಿನದಾಟ ಮುಂದುವರಿಸಿದ ಪಾಕಿಸ್ತಾನ ತಂಡ ದಿನದಂತ್ಯಕ್ಕೆ 239 ರನ್‌ಗೆ ಆಲೌಟ್ ಆಯಿತು. ಇದರಿಂದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 192 ರನ್ ಮುನ್ನಡೆ ಸಾಧಿಸಿತು.

ಪಾಕ್ ತಂಡ ಒಂದು ಹಂತದಲ್ಲಿ 80 ರನ್‌ಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು. ಆಗ ಜತೆಗೂಡಿದ ಫಹೀಮ್-ರಿಜ್ವಾನ್ ಜೋಡಿ 7ನೇ ವಿಕೆಟ್‌ಗೆ 107 ರನ್ ಜತೆಯಾಟವಾಡಿತು. ರಿಜ್ವಾನ್ ನಿರ್ಗಮನದ ಬಳಿಕ ಬಾಲಂಗೋಚಿಗಳ ಜತೆಗೂಡಿ ಹೀಮ್ ತಂಡವನ್ನು ಫಾಲೋಆನ್‌ನಿಂದ ರಕ್ಷಿಸಿಸಿದರು. ಕೊನೆಗೆ ಚೊಚ್ಚಲ ಶತಕದಿಂದ 9 ರನ್ ದೂರವಿದ್ದಾಗ ಹೀಮ್ ಔಟ್ ಆಗುವುದರೊಂದಿಗೆ ಪಾಕ್ ಕೂಡ ಆಲೌಟ್ ಆಯಿತು. ಮಳೆ ಅಡಚಣೆಯಿಂದಾಗಿ ದಿನದಾಟದ ಕೆಲ ಓವರ್ ನಷ್ಟವಾದವು.

ನ್ಯೂಜಿಲೆಂಡ್: 431, ಪಾಕಿಸ್ತಾನ: 102.2 ಓವರ್‌ಗಳಲ್ಲಿ 239 (ಅಬಿದ್ 25, ಅಬ್ಬಾಸ್ 5, ಅಜರ್ ಅಲಿ 5, ರಿಜ್ವಾನ್ 71, ಫಹೀಮ್ ಅಶ್ರಫ್​ 91, ಜೇಮಿಸನ್ 35ಕ್ಕೆ 3, ಬೌಲ್ಟ್ 71ಕ್ಕೆ 2, ಸೌಥಿ 69ಕ್ಕೆ 2, ವ್ಯಾಗ್ನರ್ 50ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net