

ಇಸ್ಲಾಮಾಬಾದ್: ಹಿಟ್ಟು, ಸಕ್ಕರೆ, ಎಣ್ಣೆ ಮತ್ತು ಅಗತ್ಯ ಆಹಾರ ಧಾನ್ಯಗಳ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈಗ ಏನಕ್ಕೆ ಕೊರತೆಯುಂಟಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಹೌದು, ಪಾಕಿಸ್ತಾನದಲ್ಲಿ ಸದ್ಯ ಪಾಸ್‌ಪೋರ್ಟ್‌ಗಳನ್ನು ಮುದ್ರಿಸುತ್ತಿಲ್ಲ. ಲ್ಯಾಮಿನೇಷನ್ ಪೇಪರ್ ಕೊರತೆಯೇ ಇದಕ್ಕೆ ಕಾರಣ. ಪಾಕಿಸ್ತಾನದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಈ ಮಾಹಿತಿಯನ್ನು ನೀಡಿದೆ. ಹೊಸ ಪಾಸ್‌ಪೋರ್ಟ್ ಪಡೆಯಲು ನಾಗರಿಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರಿಕೆ ಹೇಳುತ್ತದೆ. ಈ ಸುದ್ದಿ ಈಗ ಪ್ರಪಂಚದಾದ್ಯಂತ ಹಬ್ಬಿದೆ. ಈ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಮೌನವಾಗಿದೆ.
ಲ್ಯಾಮಿನೇಷನ್ ಪೇಪರ್ ಕೊರತೆಯು ಕೆಲಸ, ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಲು ಯೋಜಿಸುತ್ತಿರುವ ಸಾವಿರಾರು ಪಾಕಿಸ್ತಾನಿಗಳ ಮೇಲೆ ಪರಿಣಾಮ ಬೀರಿದೆ. ಪ್ರಪಂಚದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳು ಬಿಕ್ಕಟ್ಟಿಗೆ ಪಾಕಿಸ್ತಾನದ ಸರ್ಕಾರದ ಅಸಮರ್ಥತೆಯನ್ನು ದೂಷಿಸಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿರುವ ಗುಲ್ ಅವರು ಪತ್ರಿಕೆಯೊಂದಕ್ಕೆ 'ನಾನು ಶೀಘ್ರದಲ್ಲೇ ಕೆಲಸಕ್ಕಾಗಿ ದುಬೈಗೆ ಹೋಗಲು ಸಿದ್ಧನಾಗಿದ್ದೆ. ನಮ್ಮ ಅದೃಷ್ಟವು ಅಂತಿಮವಾಗಿ ಬದಲಾಗುತ್ತದೆ ಎಂದು ನನ್ನ ಕುಟುಂಬ ಮತ್ತು ನಾನು ತುಂಬಾ ಸಂತೋಷಪಟ್ಟೆವು, ಆದರೆ ನನ್ನ ಸುವರ್ಣ ಅವಕಾಶ ಕಳೆದುಕೊಂಡೆ' ಎಂದು ದೂರಿದ್ದಾರೆ.
ಅಂಧಕಾರದಲ್ಲಿ ವಿದ್ಯಾರ್ಥಿಗಳ ಭವಿಷ್ಯ
ಪೇಶಾವರದ ವಿದ್ಯಾರ್ಥಿನಿ ಹೀರಾ, 'ಇತ್ತೀಚೆಗಷ್ಟೇ ತನ್ನ ಇಟಲಿ ವಿದ್ಯಾರ್ಥಿ ವೀಸಾವನ್ನು ಅನುಮೋದಿಸಲಾಗಿದೆ. ಅಕ್ಟೋಬರ್‌ನಲ್ಲಿ ಸೇರಬೇಕಿತ್ತು. ಆದರೆ, ಪಾಸ್‌ಪೋರ್ಟ್ ಇಲ್ಲದ ಕಾರಣ ನನ್ನ ಅವಕಾಶವೂ ಕೈತಪ್ಪಿ ಹೋಗಿದೆ’ ಎಂದರು. ಪೇಶಾವರ ನಿವಾಸಿ ಮುಹಮ್ಮದ್ ಇಮ್ರಾನ್ ಅವರು ಪಾಸ್‌ಪೋರ್ಟ್ ಇಲಾಖೆಯ ನಿರಂತರ ವಿಳಂಬದಿಂದ ಬೇಸತ್ತಿದ್ದಾರೆ ಮತ್ತು ಅವರು ಅರ್ಜಿದಾರರಿಗೆ ಸತ್ಯವನ್ನು ಹೇಳುವ ಬದಲು ದಿನ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2013ರಲ್ಲೂ ಇದೇ ತೊಂದರೆ ಎದುರಾಗಿತ್ತು
ಏತನ್ಮಧ್ಯೆ, ಪೇಶಾವರದ ಪಾಸ್‌ಪೋರ್ಟ್ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಅನಾಮಧೇಯತೆಯ ಷರತ್ತಿನ ಮೇಲೆ, ಈ ಹಿಂದೆ 3000 ರಿಂದ 4000 ಪಾಸ್‌ಪೋರ್ಟ್‌ಗಳಿಗೆ ಹೋಲಿಸಿದರೆ ಈಗ ಪ್ರತಿದಿನ 12 ರಿಂದ 13 ಪಾಸ್‌ಪೋರ್ಟ್‌ಗಳನ್ನು ಮಾತ್ರ ಮುದ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಆದರೆ, ಪಾಕಿಸ್ತಾನದಲ್ಲಿ ಇಂತಹ ಬಿಕ್ಕಟ್ಟು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2013 ರಲ್ಲಿ, ಡಿಜಿ ಮತ್ತು ಪಿ ಪ್ರಿಂಟರ್‌ಗಳಿಗೆ ಹಣವನ್ನು ಪಾವತಿಸದ ಕಾರಣ ಮತ್ತು ಲ್ಯಾಮಿನೇಶನ್ ಪೇಪರ್‌ಗಳ ಕೊರತೆಯಿಂದಾಗಿ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.