

Pak Flood: ಭೀಕರ ಪ್ರವಾಹದಿಂದ ತತ್ತರಿಸಿರುವ ಪಾಕಿಸ್ತಾನ, ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿದೆ. ಈ ನಡುವೆ ಪಾಕ್ ಜನರಿಗೆ ರಕ್ಷಣಾ ಸಚಿವ ಖವಾಜಾ ಆಸಿಫ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದು, ಪ್ರವಾಹ ಒಂದು ರೀತಿ ದೇವರ ಆಶೀರ್ವಾದ ಇದ್ದಂತೆ, ನೀರನ್ನು ಚರಂಡಿಗೆ ಬಿಡದೆ ಮನೆಯ ಪಾತ್ರೆಗಳು, ಟಬ್ಗಳಲ್ಲಿ ಸಂಗ್ರಹಿಸಿಡುವಂತೆ ಟಿವಿ ಸಂದರ್ಶನವೊಂದರಲ್ಲಿ ಸಲಹೆ ನೀಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಾದ್ಯಂತ ದಾಖಲೆಯ ಮಾನ್ಸೂನ್ ಮಳೆ ಹಿನ್ನೆಲೆ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ 2.4 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ಸಾವಿರಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಪಾಕಿಸ್ತಾನದ ದುನ್ಯಾ ನ್ಯೂಸ್ ಜೊತೆ ಮಾತನಾಡಿರುವ ಆಸಿಫ್, ಪ್ರವಾಹದಂತಹ ಪರಿಸ್ಥಿತಿ ವಿರುದ್ಧ ಪ್ರತಿಭಟಿಸುವ ಜನ ಪ್ರವಾಹದ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಆ ನೀರನ್ನು ಮನೆಯ ಪಾತ್ರೆಗಳು, ಟಬ್ಗಳಲ್ಲಿ ಸಂಗ್ರಹಿಸಿಡಬೇಕು. ನಾವು ಈ ನೀರನ್ನು ಆಶೀರ್ವಾದದ ರೂಪದಲ್ಲಿ ನೋಡಬೇಕು ಹೇಳಿದ್ದಾರೆ.
ಬೃಹತ್ ಆಣೆಕಟ್ಟು ಯೋಜನೆಗಳಿಗಾಗಿ 10-15 ವರ್ಷ ಕಾಯುವ ಬದಲು, ತ್ವರಿತವಾಗಿ ಪೂರ್ಣಗೊಳ್ಳಬಹುದಾದ ಸಣ್ಣ ಅಣೆಕಟ್ಟುಗಳನ್ನು ಪಾಕಿಸ್ತಾನ ನಿರ್ಮಿಸಬೇಕು. ನಾವು ಮಳೆ ನೀರನ್ನು ಚರಂಡಿಗೆ ಬಿಡುತ್ತಿದ್ದೇವೆ. ನಾವು ಅದನ್ನು ಸಂಗ್ರಹಿಸಬೇಕು ಎಂದು ಇದೇ ವೇಳೆ ಪಾಕ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಪ್ರವಾಹ
ಪಾಕ್ನ ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 2.4 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ಸಾವಿರಕ್ಕೂ ಹೆಚ್ಚು ಗ್ರಾಮಗಳು ಮುಳುಗಿವೆ. ಜೂನ್ 26ರಿಂದ ಆಗಸ್ಟ್ 31ವರೆಗೆ ಪ್ರವಾಹದಿಂದಾಗಿ 854 ಪ್ರಜೆಗಳು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಪಂಜಾಬ್ನಾದ್ಯಂತ ಇನ್ನೂ ಎರಡು ದಿನಗಳ ಕಾಲ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದ್ದು, ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಮತ್ತು ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾಕಿಸ್ತಾನದಾದ್ಯಂತ ಕೃಷಿಭೂಮಿಗಳು ಜಲಾವೃತಗೊಂಡಿರುವುದು ಮತ್ತು ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳು ನಾಶವಾಗುತ್ತಿರುವುದು ದೇಶದಲ್ಲಿ ಆಹಾರ ಬಿಕ್ಕಟ್ಟು ಮತ್ತು ಹಣದುಬ್ಬರದ ಕಳವಳವನ್ನು ಉಂಟುಮಾಡಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. (ಏಜೆನ್ಸೀಸ್)