

ವಿಭಜನೆಯ ಲಾಗಾಯ್ತಿನಿಂದಲೂ ಭಾರತದ ವಿರುದ್ಧ ಪಾಕಿಸ್ತಾನ ದ್ವೇಷಭಾವದಿಂದ ವರ್ತಿಸುವುದನ್ನು ಚಾಳಿಯನ್ನಾಗಿಸಿಕೊಂಡಿದೆ. ಎರಡೂ ದೇಶಗಳ ನಡುವೆ ಕಾರ್ಗಿಲ್ ಸಮರವೂ ಸೇರಿದಂತೆ ಈವರೆಗೆ ನಾಲ್ಕು ಬಾರಿ ಯುದ್ಧಗಳು ನಡೆದಿವೆ. ಇದೇ ವರ್ಷದ ಮೇನಲ್ಲಿ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿಯೂ ಪಾಕ್ ತೀವ್ರ ಮುಖಭಂಗ ಅನುಭವಿಸಿದೆ. ಈ ಹಿಂದಿನ ನಾಲ್ಕು ಸಮರಗಳಲ್ಲಿ ಸೋತು ಹೈರಾಣಾಗಿದ್ದರೂ ಪಾಕ್ನ ಆಡಳಿತಗಾರರು ಮತ್ತು ಸೇನೆ ಬುದ್ಧಿ ಕಲಿತಿಲ್ಲ. ಭಾರತದ್ವೇಷವನ್ನು ಕಾಪಾಡಿಕೊಂಡು ಬರದಿದ್ದರೆ, ಅದಕ್ಕೆ ಹೊಗೆಹಾಕುವ ಕೆಲಸವನ್ನು ಮಾಡುತ್ತಲೇ ಇರದಿದ್ದರೆ ಅಲ್ಲಿ ಆಳುವವರಿಗೆ ಉಳಿಗಾಲವಿಲ್ಲ. ಹೀಗೆ ಸ್ವಾರ್ಥಕ್ಕಾಗಿ ಉಭಯ ದೇಶಗಳ ನಡುವೆ ಶಾಶ್ವತ ವೈರತ್ವ ನೆಲೆಸುವಂತೆ ಮಾಡುವುದು ಅಲ್ಲಿನ ನಾಯಕರ ಕಾರ್ಯತಂತ್ರವೇ ಆಗಿಹೋಗಿದೆ. ಅಂತರಂಗದಲ್ಲಿ ವಿಷವೇ ತುಂಬಿಕೊಂಡಿರುವ ಪಾಕ್ ಬಗ್ಗೆ ಭಾರತದ ನೀತಿನಿರೂಪಕರು ದಿಟ್ಟ ನಿಲುವು ತಳೆಯಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮುಖವಾಡವನ್ನು ಕಳಚಿ ಹಾಕುವ ಕಾರ್ಯತಂತ್ರ ನಿಪುಣತೆಯನ್ನು ಪ್ರದರ್ಶಿಸಬೇಕಿದೆ.
ಪಾಕಿಸ್ತಾನದ ಸೋಲಿನ ಚರಿತ್ರೆ ಇಡೀ ಜಗತ್ತಿಗೆ ಗೊತ್ತಿರುವಂಥದ್ದು. ಭಾರತದೊಂದಿಗಿನ ಪ್ರತಿ ಯುದ್ಧದಲ್ಲೂ ಅದು ಹೀನಾಯ ಪರಾಭವ ಕಂಡಿದೆ. ಆದರೂ, ಪಾಕಿಸ್ತಾನ ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಸಚಿವರು ಭಾರತಕ್ಕೆ ಬೆದರಿಕೆಯ ದನಿಯಲ್ಲಿ ಮಾತನಾಡಿರುವುದು ಉದ್ಧಟತನವಲ್ಲದೆ ಮತ್ತೇನೂ ಅಲ್ಲ. ‘ಪಾಕಿಸ್ತಾನದ ವಿರುದ್ಧ ಭಾರತ ಮತ್ತೆ ಸೇನಾ ಸಂಘರ್ಷಕ್ಕೆ ಮುಂದಾದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುವುದು’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾನುವಾರ ಹೇಳಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗಷ್ಟೇ ಮತ್ತೆ ದುಸ್ಸಾಹಸಕ್ಕೆ ಕೈ ಹಾಕದಂತೆ ಮತ್ತು ಭಯೋತ್ಪಾದನೆಯ ಪೋಷಣೆಯನ್ನು ತ್ಯಜಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ವಾಸ್ತವ ಅರಗಿಸಿಕೊಳ್ಳಲಾಗದ ಪಾಕ್ ಅಹಂಕಾರದಲ್ಲಿ ಮೆರೆಯುತ್ತಿದ್ದು, ಈ ಹಿಂದಿನ ಸೋಲುಗಳ ಜಾಣಮರೆವು ತೋರುತ್ತಿದೆ. ಆದರೆ, ಇತಿಹಾಸ ಎಂದೂ ಬದಲಾಗುವುದಿಲ್ಲ. ಅದು ವಾಸ್ತವಕ್ಕೆ ಕನ್ನಡಿ. ಈ ಹಿನ್ನೆಲೆಯಲ್ಲಿ ಭಾರತ-ಪಾಕ್ ಸಮರ ಮತ್ತು ಪ್ರಮುಖ ಕಾರ್ಯಾಚರಣೆಗಳ ಅವಲೋಕನ ಇಲ್ಲಿದೆ.
ಸಮರ ಇತಿಹಾಸ
ಭಾರತ ಮತ್ತು ಪಾಕಿಸ್ತಾನ ನಡುವೆ ಕಾದಾಟಕ್ಕೆ ಪ್ರಮುಖವಾಗಿ ಕಾರಣವಾದದ್ದು ಕಾಶ್ಮೀರದ ಮೇಲೆ ಪಾಕಿಸ್ತಾನಕ್ಕಿರುವ ಮೋಹ. ಆದರೆ, ಕಾರ್ಗಿಲ್ ಸೇರಿ ಈವರೆಗಿನ ನಾಲ್ಕೂ ಯುದ್ಧಗಳಲ್ಲಿ ಪಾಕಿಸ್ತಾನ ದಾರುಣವಾಗಿ ಸೋತಿದೆ. ಭಾರತೀಯ ಸೇನೆ 2025ರ ಮೇನಲ್ಲಿ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿನ ಭಯೋತ್ಪಾದಕರ ಹಲವು ಅಡಗುತಾಣಗಳನ್ನು ಧ್ವಂಸಗೊಳಿಸಿದೆ.
1. ಕಾಶ್ಮೀರದ ಮೇಲೆ ದಾಳಿ: ಮೊದಲ ಇಂಡೋ-ಪಾಕ್ ಯುದ್ಧ
ಅಂದು ರಾಜಾಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಮತ್ತು ಕಾಶ್ಮೀರಕ್ಕಾಗಿ 1947-48ರಲ್ಲಿಯೇ ಮೊದಲ ಸಮರ ನಡೆಯಿತು. ಇದನ್ನು ‘ಮೊದಲ ಕಾಶ್ಮೀರ ಯುದ್ಧ’ ಎಂತಲೂ ಕರೆಯುತ್ತಾರೆ. ಕಾಶ್ಮೀರವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕೆಂಬ ಅತಿಯಾಸೆ ಹೊಂದಿದ್ದ ಪಾಕಿಸ್ತಾನ, ವಿಭಜನೆಯ ಹೊಸ್ತಿಲಲ್ಲೇ ವಜಿರಿಸ್ತಾನದ ಬುಡಕಟ್ಟು ಜನರನ್ನು ಒಳಗಂಡ ಸೇನಾಪಡೆ ಮೂಲಕ ಜಮ್ಮು-ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಮಹಾರಾಜ ಹರಿ ಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿದರು. ಭಾರತವು ಆ ಪ್ರದೇಶವನ್ನು ರಕ್ಷಿಸಲು ಸೈನ್ಯ ಕಳುಹಿಸಿತು. ಇದು ಎರಡು ರಾಷ್ಟ್ರಗಳ ನಡುವೆ ಸಂಪೂರ್ಣ ಸಂಘರ್ಷಕ್ಕೆ ಕಾರಣವಾಯಿತು. 1949ರವರೆಗೂ ಸಮರ ಮುಂದುವರಿಯಿತು. ಬಳಿಕ ವಿಶ್ವಸಂಸ್ಥೆ ಯುದ್ಧವಿರಾಮ ಘೋಷಿಸಿತು. ಇದರ ಪರಿಣಾಮ ನಿಯಂತ್ರಣ ರೇಖೆಯ ಉದ್ದಕ್ಕೂ (ಎಲ್ಒಸಿ) ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಭಜನೆಯಾಯಿತು. ಜಮ್ಮು ಕಾಶ್ಮೀರದ ಸುಮಾರು ಮೂರನೇ ಎರಡರಷ್ಟು ಭಾಗದ ಮೇಲೆ, ಅಂದರೆ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್ ಮೇಲೆ ಭಾರತ ಹಿಡಿತ ಸಾಧಿಸಿತು. ಪಾಕಿಸ್ತಾನ ಕಾಶ್ಮೀರದ ಸರಿಸುಮಾರು ಮೂರನೇ ಒಂದು ಭಾಗ ಅಂದರೆ ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ಗಳನ್ನು ಆಕ್ರಮಿಸಿತು. ಈ ಸಮರದಲ್ಲಿ ಭಾರತದ ಸೇನೆಯ ಪರಾಕ್ರಮದ ಎದುರು ಪಾಕ್ ಪತರುಗುಟ್ಟಿತು. ಆದರೆ, ಅಂದು ಆರಂಭವಾದ ಕಾಶ್ಮೀರ ರಗಳೆ ಭಾರತದ ಪಾಲಿಗೆ ಇಂದಿಗೂ ತಲೆನೋವಾಗಿದೆ.
ಯುದ್ಧದ ಅವಧಿ: 1947ರ ಅಕ್ಟೋಬರ್ 22ರಿಂದ 1948ರ ಡಿಸೆಂಬರ್ 31 (15 ತಿಂಗಳು).
2. ಎರಡನೇ ಇಂಡೋ: ಪಾಕ್ ಯುದ್ಧ
ಉಭಯ ದೇಶಗಳ ಸೇನೆಗಳ ನಡುವೆ ನಡೆಯುತ್ತಿದ್ದ ಚಕಮಕಿ ಅಂತಿಮವಾಗಿ ಯುದ್ಧ ರೂಪಕ್ಕೆ ತಿರುಗಿತು. 1965ರ ಆಗಸ್ಟ್ 5ರಂದು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸಾವಿರಾರು ಪಾಕಿಸ್ತಾನಿ ಸೈನಿಕರು ಸ್ಥಳೀಯ ದಂಗೆಕೋರರ ವೇಷ ಧರಿಸಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ ಮೂಲಕ ಭಾರತೀಯ ಪ್ರದೇಶಕ್ಕೆ ನುಸುಳಿದ್ದರು. ‘ಆಪರೇಷನ್ ಜಿಬ್ರಾಲ್ಟರ್’ ಎನ್ನುವ ರಹಸ್ಯ ಕಾರ್ಯಾಚರಣೆ ನಡೆಸಿ ಸ್ಥಳೀಯವಾಗಿ ನಡೆಯುತ್ತಿದ್ದ ಗಂಗೆಗಳನ್ನು ಪ್ರಚೋದಿಸುತ್ತಿದ್ದರು. ಈ ಯುದ್ಧವೂ ಕಾಶ್ಮೀರವನ್ನು ನಿಮಿತ್ತವಾಗಿಟ್ಟುಕೊಂಡೇ ನಡೆಯಿತು. ಐದು ವಾರಗಳ ಹೋರಾಟವು ಎರಡೂ ಕಡೆ ಅಪಾರ ಸಾವುನೋವನ್ನುಂಟು ಮಾಡಿತು. ಭಾರತೀಯ ಸೇನೆ ಪಾಕ್ಗೆ ತಕ್ಕ ಪ್ರತ್ಯುತ್ತರ ನೀಡಿತು. 1965ರ ಸೆಪ್ಟೆಂಬರ್ 23ರವರೆಗೆ ಯುದ್ಧ ಮುಂದುವರಿಯಿತು. ಸೋವಿಯತ್ ಒಕ್ಕೂಟ ಮತ್ತು ವಿಶ್ವಸಂಸ್ಥೆ ಮಧ್ಯಪ್ರವೇಶ ಹಾಗೂ ತಾಷ್ಕೆಂಟ್ ಒಪ್ಪಂದದ ನಂತರ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು.
ಯುದ್ಧದ ಅವಧಿ: 1965ರ ಆಗಸ್ಟ್ 5ರಿಂದ ಸೆಪ್ಟೆಂಬರ್ 23
3. ಬಾಂಗ್ಲಾ ವಿಮೋಚನೆ ಯುದ್ಧ
ಅತಿ ಸಂಕ್ಷಿಪ್ತ ಅವಧಿಯ ಯುದ್ಧವಿದು. ವಿಭಜನೆಯ ನಂತರದಲ್ಲಿ ಪೂರ್ವ ಪಾಕಿಸ್ತಾನವಾಗಿದ್ದ ಭಾಗವು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ದೇಶವಾಗಲು ಬಯಸಿತ್ತು. ಅದಕ್ಕಾಗಿ ಬಾಂಗ್ಲಾ ವಿಮೋಚನಾ ಸಮರ ನಡೆದಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನದ ಪಡೆಗಳು ಭಾರತದ 11 ವಾಯುಲೆನೆಗಳ ಮೇಲೆ ದಾಳಿಗೈದವು. ಇದರಿಂದಾಗಿ ಭಾರತದ ಸೇನೆಯು ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನೇರವಾಗಿ ಭಾಗವಹಿಸಿತು. ಪಾಕಿಸ್ತಾನದ ಈಸ್ಟರ್ನ್ ಕಮಾಂಡ್ ಶರಣಾಗತಿ ಒಪ್ಪಂದಕ್ಕೆ ಸಹಿಹಾಕಿದಾಗ ಯುದ್ಧ ನಿಲುಗಡೆಯಾಯಿತು. ಪಾಕಿಸ್ತಾನದ ಸುಮಾರು 90 ಸಾವಿರ ಸೈನಿಕರನ್ನು ಭಾರತ ಯುದ್ಧಕೈದಿಗಳನ್ನಾಗಿಸಿತು. ಈ ಯುದ್ಧದ ಫಲಿತವಾಗಿ ಬಾಂಗ್ಲಾದೇಶ ರಚನೆಯಾಯಿತು. ಇದು ಪಾಕಿಸ್ತಾನ ಕಂಡ ಅತ್ಯಂತ ಅವಮಾನಕರ ಸೋಲು. ಶಿಮ್ಲಾ ಒಪ್ಪಂದದ ಮೂಲಕ ಗಡಿರೇಖೆ (ಎಲ್ಒಸಿ) ಸ್ಥಾಪನೆಯಾಯಿತು. ಭಾರತ ವಶಪಡಿಸಿಕೊಂಡ ಭೂಪ್ರದೇಶವನ್ನು ಪಾಕಿಸ್ತಾನಕ್ಕೆ ವಾಪಸ್ ನೀಡಲಾಯಿತು.
ಯುದ್ಧದ ಅವಧಿ: 1971ರ ಡಿಸೆಂಬರ್ 3ರಿಂದ 16 (13 ದಿನ).
4. ಕಾರ್ಗಿಲ್ ಸಮರ
ಜಮ್ಮು ಮತ್ತು ಕಾಶ್ಮಿರದ ಕಾರ್ಗಿಲ್ ಪ್ರದೇಶಕ್ಕೆ ಭಯೋತ್ಪಾದಕರ ಜತೆ ನುಗ್ಗಿ ಬಂದ ಪಾಕಿಸ್ತಾನ ಸೇನೆ ಮತ್ತೊಮ್ಮೆ ಸಂಘರ್ಷ ಸೃಷ್ಟಿಸಿತು. 1999ರಲ್ಲಿ ಮೇನಿಂದ ಜುಲೈವರೆಗೆ ಭಾರತ ಮತ್ತು ಪಾಕಿಸ್ತಾನದ ಕಾರ್ಗಿಲ್ ಯುದ್ಧ ನಡೆಯಿತು. ಇದಕ್ಕೆ ಭಾರತ ‘ಆಪರೇಷನ್ ವಿಜಯ’ ಎಂದು ಹೆಸರಿಟ್ಟಿತು. ವಾಯುಪಡೆಯ ‘ಆಪರಷೇನ್ ಸಫೇದ್ ಸಾಗರ್’ ಬೆಂಬಲದೊಂದಿಗೆ 1999ರ ಜುಲೈ 26ರಂದು ಭಾರತವು ನಿಯಂತ್ರಣವನ್ನು ಮರಳಿ ಪಡೆಯಿತು. ಭಾರತ ರಕ್ಷಣಾ ಪಡೆಗಳು ಕೈಗೊಂಡ ಕ್ಷಿಪ್ರ ಕಾರ್ಯಾಚರಣೆ ಹಾಗೂ ಮಿಂಚಿನ ಪ್ರತಿದಾಳಿಗೆ ಬೆದರಿದ ಪಾಕಿಸ್ತಾನ ಪಲಾಯನ ಮಾಡಿತು. ಯುದ್ಧ ಕೊನೆಗೊಂಡ ದಿನವಾದ ಜುಲೈ 26ರನ್ನು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನವಾಗಿ ಆಚರಿಸಲಾಗುತ್ತಿದೆ.
ಯುದ್ಧದ ಅವಧಿ: 1999ರ ಮೇನಿಂದ ಜುಲೈ 26.
ಕಾರ್ಯಾಚರಣೆಗಳು
ಉರಿ ದಾಳಿಗೆ ಪ್ರತೀಕಾರ ಜಮ್ಮು ಮತ್ತು ಕಾಶ್ಮಿರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ 2016ರ ಸೆಪ್ಟೆಂಬರ್ 18ರಂದು ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ಪೈಶಾಚಿಕ ದಾಳಿಯಲ್ಲಿ 19 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತೀಕಾರದ ಕ್ರಮವಾಗಿ ಭಾರತೀಯ ಸೇನೆಯು ಸೆಪ್ಟೆಂಬರ್ 28 ಮತ್ತು 29ರಂದು ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಭಾರತೀಯ ರಕ್ಷಣಾ ಪಡೆಗಳು ನಡೆಸಿದ ಈ ದಿಟ್ಟ ಕಾರ್ಯಾಚರಣೆಯಿಂದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಉಗ್ರರ ಅಡಗುತಾಣ, ಶಿಬಿರಗಳು ಧ್ವಂಸಗೊಂಡು, ಹಲವು ಉಗ್ರರು ಹತರಾದರು.
ಪುಲ್ವಾಮಾ ದಾಳಿಗೆ ದಿಟ್ಟ ಉತ್ತರ...
ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಸಿಆರ್ಪಿಎಫ್ ಯೋಧರಿದ್ದ ವಾಹನವನ್ನು ಸ್ಪೋಟಿಸಿದ ಉಗ್ರರು 40 ಯೋಧರನ್ನು ಬಲಿ ತೆಗೆದುಕೊಂಡರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಉಗ್ರ ಸಂಘಟನೆಯ ಶಿಬಿರದ ಮೇಲೆ ಏರ್ಸ್ಟ್ರೈಕ್ ನಡೆಸಿ, ಪ್ರತೀಕಾರ ತೀರಿಸಿಕೊಂಡಿತು. ಭಯೋತ್ಪಾದಕರ ಹಲವು ನೆಲೆಗಳನ್ನು ಧ್ವಂಸಗೊಳಿಸ ಲಾಯಿತು. ಪಾಕ್ ವಿರುದ್ಧ 1971ರ ಬಳಿಕ ನಡೆದ ಏರ್ಸ್ಟ್ರೈಕ್ ಇದಾಗಿತ್ತು.
ಆಪರೇಷನ್ ಸಿಂಧೂರ
ಕಾಶ್ಮೀರದ ಪ್ರಸಿದ್ಧ ಪ್ರವಾಸಿತಾಣ ಪಹಲ್ಗಾಮ್ಲ್ಲಿ 2025ರ ಏಪ್ರಿಲ್ 22 ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಜನರು ಮೃತಪಟ್ಟರು. ಈ ಘಟನೆ ಭಾರಿ ಆಘಾತ ಸೃಷ್ಟಿಸಿದ್ದಲ್ಲದೆ, ಭಯೋತ್ಪಾದನೆ ಪೋಷಿಸುವ ಪಾಕ್ ನೀತಿ ಮತ್ತೊಮ್ಮೆ ಬಹಿರಂಗಗೊಂಡಿತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ 9 ಉಗ್ರರ ಶಿಬಿರಗಳನ್ನು ಸಂಪೂರ್ಣವಾಗಿ ನಾಶಪಡಿಸಿತು.