'ಬೋಲೋ ಜೈ ಶ್ರೀ ರಾಮ್': ಪಾಕ್​ ಮಾಜಿ ಕ್ರಿಕೆಟಿಗನ ಟ್ವೀಟ್ ವೈರಲ್..

pak cricketer
Published on

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನ ಬಾಕಿ ಇರುವಂತೆಯೇ ರಾಷ್ಟ್ರದಾದ್ಯಂತ ಉತ್ಸಾಹ ಪಸರಿಸುತ್ತಿದೆ. ವಿವಿಧ ರಾಜ್ಯಗಳಿಂದ ಭಗವಾನ್ ರಾಮನ ಭಕ್ತರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ವೈವಿಧ್ಯಮಯ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅಭಿಪ್ರಾಯ, ಭಾಕ್ತಿ, ಭಾವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ವಿದೇಶಗಳೂ ಹೊರತಾಗಿಲ್ಲ. ಗಮನಾರ್ಹವೆಂದರೆ, ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು ರಾಮಮಂದಿರ ಉದ್ಘಾಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಕೇಸರಿ ಧ್ವಜ ಹಿಡಿದು, ಅಲಂಕೃತ ಭಗವಾನ್ ರಾಮ ಮತ್ತು ದೇವಾಲಯದ ಫೋಟೋಗಳನ್ನು ಪೋಸ್ಟ್​ ಮಾಡಿದ್ದು, ಇದು ವೈರಲ್​ ಆಗಿದೆ.

X (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿರುವ ಕನೇರಿಯಾ, ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯವಾದ ದೇವಾಲಯ ಉದ್ಘಾಟನೆಗೆ ಕೇವಲ ಎಂಟು ದಿನ ಬಾಕಿಯಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಕೇಸರಿ ಧ್ವಜ ಅಲಂಕರಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಮ್ಮ ಭಗವಾನ್ ಶ್ರೀರಾಮನ ಅದ್ಭುತ ದೇವಾಲಯ ಸಿದ್ಧವಾಗಿದೆ. ಐತಿಹಾಸಿಕ ಹಬ್ಬಕ್ಕೆ ಇನ್ನು 8 ದಿನ ಮಾತ್ರ ಬಾಕಿ ಇದೆ. 'ಎಲ್ಲರೂ ಜೈ ಶ್ರೀರಾಮ್ ಹೇಳಿ' ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕನೇರಿಯಾ ವಿರುದ್ಧ ತಾರತಮ್ಯ: ಗುಜರಾತ್ ಮೂಲದ ಕನೇರಿಯಾ ಹಿಂದು ಕುಟುಂಬವಾಗಿದ್ದು, ಪಾಕ್​ನ ಕರಾಚಿಯಲ್ಲಿ ನೆಲೆಸಿದೆ. ಅವರು 2000 ರಿಂದ 2010 ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿ ಸೇವೆ ಸಲ್ಲಿಸಿದರು, ಅಳಿಸಲಾಗದ ಛಾಪು ಮೂಡಿಸಿದರು. ತನ್ನ ವೃತ್ತಿಜೀವನದುದ್ದಕ್ಕೂ ಕನೇರಿಯಾ ತಾರತಮ್ಯ ಮತ್ತು ಕೆಲವು ತಂಡದ ಸಹ ಆಟಗಾರರಿಂದ ಇಸ್ಲಾಂಗೆ ಮತಾಂತರಗೊಳ್ಳಲು ಅನಗತ್ಯ ಒತ್ತಡವನ್ನು ಎದುರಿಸಿದರು, ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಸಾರ್ವಜನಿಕವಾಗಿ ಅವರೇ ಇದನ್ನು ಹೇಳಿಕೊಂಡಿದ್ದರು. ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಎರಡನೇ ಹಿಂದು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 250 ಕ್ಕೂ ಹೆಚ್ಚು ಪಡೆದಿದ್ದಾರೆ.

ಜ. 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಲೋಕಾರ್ಪಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net