

ನವದೆಹಲಿ: ಪಾಕಿಸ್ತಾನ ಇತ್ತೀಚೆಗೆ ಆರ್ಥಿಕ ಸಂಕಟದಿಂದ ತತ್ತರಿಸುತ್ತಿದ್ದು ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರೆದಿದೆ ಎಂದರೆ ಅಲ್ಲಿ ಅಡುಗೆ ಅನಿಲವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಈಗ ಪಾಕಿಸ್ತಾನಕ್ಕೆ ಆಹಾರದ ಬಿಕ್ಕಟ್ಟು ಕೂಡ ತಟ್ಟಿದ್ದು ಜನರು ತತ್ತರಿಸಿ ಹೋಗಿದ್ದಾರೆ.
ಪಾಕಿಸ್ತಾನ ಆಹಾರ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವಾಗ, ಗೋಧಿ ಹಿಟ್ಟನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ದ್ವಿಚಕ್ರ ವಾಹನದಲ್ಲಿ ಜನರು ಹಿಂಬಾಲಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಜಮ್ಮು ಕಾಶ್ಮೀರ ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಲಡಾಖ್ (ಜೆಕೆಜಿಬಿಎಲ್) ಅಧ್ಯಕ್ಷ ಪ್ರೊಫೆಸರ್ ಸಜ್ಜದ್ ರಾಜಾ, “ಇದು ಮೋಟಾರ್ ಸೈಕಲ್ ರ್ಯಾಲಿ ಅಲ್ಲ, ಪಾಕಿಸ್ತಾನದ ಜನರು ಗೋಧಿ ಹಿಟ್ಟು ತುಂಬಿದ ಟ್ರಕ್ಅನ್ನು ಹಿಂಬಾಲಿಸುತ್ತಿದ್ದಾರೆ. ಕೇವಲ ಒಂದು ಪ್ಯಾಕೆಟ್ ಹಿಟ್ಟಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಮಗೆ ಭವಿಷ್ಯವಿದೆಯೇ? ಈ ವಿಡಿಯೋ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬುದರ ಒಂದು ಝಲಕ್ ಅಷ್ಟೇ' ಎಂದು ಬರೆದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)