ದಕ್ಷಿಣ ಆಫ್ರಿಕಾ ಎದುರು 2-0 ಯಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡ ಪಾಕಿಸ್ತಾನ

pak and sa match for web
Published on

ರಾವಲ್ಪಿಂಡಿ: ಏಡನ್ ಮಾರ್ಕ್ರಮ್ (108ರನ್, 243 ಎಸೆತ, 13 ಬೌಂಡರಿ, 3 ಸಿಕ್ಸರ್) ಹಾಗೂ ತೆಂಬಾ ಬವುಮಾ (61ರನ್, 125 ಎಸೆತ, 6 ಬೌಂಡರಿ) ಜೋಡಿಯ ಪ್ರತಿ ಹೋರಾಟದ ನಡುವೆಯೂ ಹಸನ್ ಅಲಿ (60ಕ್ಕೆ 5) ಮಾರಕ ದಾಳಿಗೆ ನಲುಗಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಎದುರು 95 ರನ್‌ಗಳಿಂದ ಶರಣಾಯಿತು. ಈ ಮೂಲಕ ಪಾಕಿಸ್ತಾನ ತಂಡ 2 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿತು.

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಆತಿಥೇಯ ತಂಡ ನೀಡಿದ 370 ರನ್ ಸವಾಲಿಗೆ, 1 ವಿಕೆಟ್‌ಗೆ 127 ರನ್‌ಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 91.4 ಓವರ್‌ಗಳಲ್ಲಿ 274 ರನ್‌ಗಳಿಗೆ ಸರ್ವಪತನ ಕಂಡಿತು. 59 ರನ್‌ಗಳಿಂದ ಏಡನ್ ಮಾರ್ಕ್ರಮ್ ಹಾಗೂ 48 ರನ್‌ಗಳಿಂದ ಇನಿಂಗ್ಸ್ ಆರಂಭಿಸಿದ ರಾಸೀ ವ್ಯಾನ್ ಡುಸೆನ್ ಜೋಡಿ ಆರಂಭದಲ್ಲೇ ಆಘಾತ ಕಂಡಿತು. ಮಾರ್ಕ್ರಮ್ ಹಾಗೂ ಬವುಮಾ ಪ್ರತಿಹೋರಾಟದ ನಡುವೆಯೂ ದಕ್ಷಿಣ ಆಫ್ರಿಕಾ ತಂಡದ ಇತರ ಬ್ಯಾಟ್ಸ್‌ಮನ್‌ಗಳು ವಿಲರಾದರು. ಪಾಕಿಸ್ತಾನ ಮೊದಲ ಇನಿಂಗ್ಸ್ 272 ರನ್‌ಗಳಿಸಿದರೆ, ದ.ಆಫ್ರಿಕಾ ತಂಡ 201 ರನ್‌ಗಳಿಗೆ ಆಲೌಟ್ ಆಗಿತ್ತು. ಇದರಿಂದ 71 ರನ್ ಮುನ್ನಡೆ ಸಾಧಿಸಿದ್ದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 298 ರನ್‌ಗಳಿಸಿತ್ತು. ಉಭಯ ತಂಡಗಳ 3 ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಲಾಹೋರ್‌ನಲ್ಲಿ ಆರಂಭಗೊಳ್ಳಲಿದೆ.

ಪಾಕಿಸ್ತಾನ: 272 ಮತ್ತು 298, ದಕ್ಷಿಣ ಆಫ್ರಿಕಾ: 201 ಮತ್ತು 274 (ಏಡನ್ ಮಾರ್ಕ್ರಮ್ 108, ತೆಂಬಾ ಬವುಮಾ 61, ಹಸನ್ ಅಲಿ 60ಕ್ಕೆ 5, ಶಾಹೀನ್ ಷಾ ಅಫ್ರಿದಿ 51ಕ್ಕೆ 4, ಯಾಸಿರ್ ಷಾ 56ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net