

ಮೌಂಟ್ ಮೌಂಗನುಯಿ: ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 101 ರನ್ಗಳಿಂದ ಸೋಲಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0ಯಿಂದ ಮುನ್ನಡೆ ಸಾಧಿಸಿತು. ಬೇ ಓವೆಲ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 373 ರನ್ ಗೆಲುವಿನ ಸವಾಲಿಗೆ, 3 ವಿಕೆಟ್ಗೆ 71 ರನ್ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ಪಾಕಿಸ್ತಾನ ತಂಡ ವಾದ್ ಅಲಂ (102 ರನ್, 269 ಎಸೆತ, 14 ಬೌಂಡರಿ) ಶತಕದಾಟದ ನಡುವೆಯೂ 123.3 ಓವರ್ಗಳಲ್ಲಿ 271 ರನ್ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ತಂಡದ ಪರ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಜಮೈಸನ್, ವಾಗ್ನೆರ್ ಹಾಗೂ ಸ್ಯಾಂಟ್ನೆರ್ ತಲಾ 2 ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 431 ರನ್ ಗಳಿಸಿದರೆ, ಪಾಕಿಸ್ತಾನ ಮೊದಲ ಇನಿಂಗ್ಸ್ 239 ರನ್ ಗಳಿಸಿತ್ತು. ಇದರಿಂದ 192 ರನ್ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 180 ರನ್ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಉಭಯ ತಂಡಗಳ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜನವರಿ 3 ರಿಂದ ಕ್ರೈಸ್ಟ್ಚರ್ಚ್ನಲ್ಲಿ ಆರಂಭವಾಗಲಿದೆ.
ನ್ಯೂಜಿಲೆಂಡ್ 431 ಮತ್ತು 5 ವಿಕೆಟ್ಗೆ 180 ಡಿಕ್ಲೇರ್, ಪಾಕಿಸ್ತಾನ : 239 ಮತ್ತು 123.3 ಓವರ್ಗಳಲ್ಲಿ 271 (ವಾದ್ ಅಲಂ 102, ಮೊಹಮದ್ ರಿಜ್ವಾನ್ 60, ಟೀಮ್ ಸೌಥಿ 33ಕ್ಕೆ 2, ಟ್ರೆಂಟ್ ಬೌಲ್ಟ್ 72ಕ್ಕೆ 2, ಕೈಲ್ ಜಮೈಸನ್ 35ಕ್ಕೆ 2, ನೀಲ್ ವಾಗ್ನೆರ್ 55ಕ್ಕೆ 2, ಮಿಚೆಲ್ ಸ್ಯಾಂಟ್ನೆರ್ 52ಕ್ಕೆ 2).