

ನವದೆಹಲಿ: ಜನಪ್ರಿಯ ಕ್ರಿಕೆಟ್ ಅಭಿಮಾನಿ ಬಶೀರ್ ಚಾಚಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಭಾರತವನ್ನು ಎದುರಿಸುವಾಗ ಪಾಕಿಸ್ತಾನ ಯಾವಾಗಲೂ ಆತಂಕಕ್ಕೆ ಒಳಗಾಗುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಟೀಂ ಇಂಡಿಯಾ 7 ವಿಕೆಟ್ಗಳಿಂದ ಮಣಿಸಿದ ನಂತರ ಮುನ್ನೆಲೆಗೆ ಬಂದಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯದ ಕುರಿತು ಮಾತನಾಡಿದ ಬಶೀರ್ ಚಾಚಾ, ಪಾಕಿಸ್ತಾನದ ಆಟಗಾರರು ನೀಲಿ ಅಂಗಿಯನ್ನು ನೋಡಿದಾಗಲೆಲ್ಲಾ ಅವರು ಆತಂಕಕ್ಕೆ ಒಳಗಾಗುತ್ತಾರೆ. ಭಾರತದ ಮುಂದೆ ಪಾಕಿಸ್ತಾನವು ಆತಂಕಕ್ಕೊಳಗಾಗುವುದನ್ನು ನಾನು ಹಲವು ಬಾರಿ ನೋಡಿದ್ದೇನೆ. ಆದ್ರೆ, ಅವರು ಇತರ ತಂಡಗಳ ವಿರುದ್ಧ ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ. ನೀಲಿ ಶರ್ಟ್ ನೋಡಿದಾಗಲೆಲ್ಲ ನರ್ವಸ್ ಆಗುತ್ತಾರೆ’ ಎಂದು ಹೇಳಿದರು.
ಅಹಮದಾಬಾದ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಪಾಕ್ ಆಲ್ ಔಟ್ ಆಗುವ ಮುಖೇನ 191 ರನ್ಗಳನ್ನು ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ವೈಖರಿಯಿಂದ ಗೆಲುವಿನ ಪತಾಕೆಯನ್ನು ಹಾರಿಸಿತು.
ಈ ಮೂಲಕ ಭಾರತ ಸತತ 8ನೇ ಬಾರಿಗೆ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮಣಿಸಿದ್ದು, ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ +1.821ರ ಉತ್ತಮ ನಿವ್ವಳ ರನ್-ರೇಟ್ ಪಡೆದು ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದೆ,(ಏಜೆನ್ಸೀಸ್).