

ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಇಂದು (ನ.13) ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಬರ್ ಅಜಾಮ್ (Babar Azam) ನೇತೃತ್ವದ ಪಾಕಿಸ್ತಾನ ತಂಡ ಕ್ರಿಕೆಟ್ ಜನಕ ಇಂಗ್ಲೆಂಡ್ (England) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಐಪಿಎಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಬಾಬರ್ ಅಜಮ್ ತಬ್ಬಿಬ್ಬಾದ ಪ್ರಸಂಗ ಜರುಗಿತು.
ಐಪಿಎಲ್ (IPL) ಆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಮಾತನಾಡಿ, ನಿಮಗೆ ಮತ್ತು ನಿಮ್ಮ ತಂಡಕ್ಕೆ ಇದರಿಂದ ಏನಾದರೂ ಸಹಾಯ ಆಗಬಹುದೆಂದು ನೀವು ಭಾವಿಸುತ್ತೀರಾ ಮತ್ತು ಭವಿಷ್ಯದಲ್ಲಿ ನೀವು ಐಪಿಎಲ್ ಆಡುವ ಭರವಸೆ ಇದೆಯೇ? ಎಂದು ವರದಿಗಾರ ಕೇಳಿದ ಪ್ರಶ್ನೆಗೆ ಬಾಬರ್ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಂತೆ ನೋಡಿದರು.
ವರದಿಗಾರನ ಪ್ರಶ್ನೆಗೆ ಉತ್ತರಿಸಲಾಗದೇ ತಮ್ಮ ಬಲ ಭಾಗದಲ್ಲಿ ಕುಳಿತಿದ್ದ ತಂಡದ ಮೀಡಿಯಾ ಮ್ಯಾನೇಜರ್ ಕಡೆ ಬಾಬರ್ ನೋಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪಾಕ್ ಮೀಡಿಯಾ ಮ್ಯಾನೇಜರ್, ಈ ಕ್ಷಣದಲ್ಲಿ ನಾವು ವಿಶ್ವಕಪ್ ಫೈನಲ್ ಕುರಿತಾದ ಪ್ರಶ್ನೆಗಳನ್ನು ಮಾತ್ರ ಸ್ವೀಕರಿಸುತ್ತೇವೆ. ಫೈನಲ್ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ ಎಂದರು. ಆದರೆ, ಬಾಬರ್ ಈ ಪ್ರಶ್ನೆಯಿಂದ ಕೊಂಚ ವಿಚಲಿತರಾಗಿರುವಂತೆ ಕಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು (ನ.13) ಮಧ್ಯಾಹ್ನ 1.30ಕ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಟ್ರೋಫಿಗಾಗಿ ಪಾಕ್ ಮತ್ತು ಇಂಗ್ಲೆಂಡ್ ಕಾದಾಡಲಿವೆ. (ಏಜೆನ್ಸೀಸ್)