

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ
ಎಂ.ಆರ್.ಪಿ.ಎಲ್ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಗೋಡೆಗಳು ಇದೀಗ ಬಣ್ಣ ಬಣ್ಣದ ಚಿತ್ತಾರದಿಂದ ಕಂಗೊಳಿಸುತಿದೆ. ಎಂ.ಆರ್.ಪಿ.ಎಲ್ ತನ್ನ ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಗೋಡೆಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರ ಬಿಡಿಸಿದ್ದು, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ಯೋಚನೆ ರೂಪಿಸಿ ಮುಂದುವರಿದಿದೆ.
ಇದೀಗ ಸರ್ಕಾರಿ ಶಾಲೆ ಮಕ್ಕಳು ಫುಲ್ ಖುಷ್ ಆಗಿದ್ದಾರೆ. ಶಾಲೆ ಗೋಡೆಗಳಲ್ಲಿ ಭಾರತ, ದ.ಕನ್ನಡ ಹೀಗೆ ಬೇರೆ ಬೇರೆ ದೇಶ ಮತ್ತು ರಾಜ್ಯಗಳ ಚಿತ್ರಗಳು, ದಾಸವಾಳ, ಗುಲಾಬಿ ಬಗೆಗಿನ ವಿವರ, ಅನ್ನನಾಳ, ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ, ಹೃದಯ, ಪಿತ್ತ ಜನಕಾಂಗ ಬಗೆಗಿನ ಸವಿವರ ಮಾಹಿತಿ, ಬಾಳೆಗಿಡ, ಹಳ್ಳಿ, ಗದ್ದೆ ಉಳುಮೆ ರೈತರ ದಿನಚರಿ, ನಾಡಿನ ಬೇರೆ ಬೇರೆ ಸಾಹಿತಿಗಳು, ವಿವಿಧ ರೇಖಾ ಚಿತ್ರಗಳು, ಬಾಹ್ಯಾಕಾಶ ಹೀಗೆ, ಶಾಲೆ ವಾತಾವರಣ ಈ ಗೋಡೆ ಬರಹಗಳಿಂದ ತುಂಬಿದೆ.
ಸವಿವರ ಮಾಹಿತಿ
ಹಿಂದಿನ ದಿನಗಳಲ್ಲಿ ಮಕ್ಕಳಿಗೆ ಈ ಎಲ್ಲ ವಿವರಣೆಗಳು ಸಿಗಬೇಕಾದರೆ ಪುಸ್ತಕ ತೆರೆಯುವ ಅಗತ್ಯ ಇತ್ತು, ಆದರೆ ಇದೀಗ ಶಾಲೆ ಅಂಗಳಕ್ಕೆ ಬಂದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರಗಳು ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯುತ್ತಿದೆೆ. ಶಿಕ್ಷಕರು ಬೋರ್ಡಿನಲ್ಲಿ ಚಿತ್ರ ಬರೆದು, ವಿದ್ಯಾರ್ಥಿಗಳಿಗೆ ವಿವರಿಸುವ ಬದಲು, ಚಿತ್ರದ ಬಳಿಯೇ ಎಲ್ಲ ವಿವರಿಸಬಹುದಾಗಿದೆ, ಚಿತ್ರಗಳು ಅತ್ಯಂತ ಸ್ಪಷ್ಟವಾಗಿದ್ದು, ವಿದ್ಯಾರ್ಥಿಗಳಿಗೆ ಅರ್ಥವಾಗುವ ನಿಟ್ಟಿನಲ್ಲಿ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಬಣ್ಣಗಳನ್ನು ಬಳಿಯಲಾಗಿದೆ.
ದೇಲಂತಬೆಟ್ಟು, ಚೇಳಾಯರು, ಕುತ್ತೆತ್ತೂರು, ಸೂರಿಂಜೆ ಮತ್ತಿತರ ಸರ್ಕಾರಿ ಶಾಲೆಗಳ ಗೋಡೆಗಳಲ್ಲೂ ಇಂಥ ಚಿತ್ರ ಬಿಡಿಸಲಾಗಿದ್ದು, ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಮುಂದೆ ಇನ್ನೂ ಹಲವು ಶಾಲೆಗಳಿಗೆ ಈ ರೀತಿಯ ಚಿತ್ರ ಬಳಿಯುವ ಯೋಜನೆ ಎಂ.ಆರ್.ಪಿ.ಎಲ್ ಸಂಸ್ಥೆಯದ್ದು.
ಮೂಲಸೌಕರ್ಯಕ್ಕೆ ಸಹಕಾರ
ಎಂ.ಆರ್.ಪಿ.ಎಲ್ ನಿರಂತರ ಸಮಾಜಮುಖಿ ಚಟುವಟಿಕೆಗಳಿಂದ ತೊಡಗಿಕೊಂಡಿದ್ದು, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಮೂಲಸೌಕರ್ಯ ಹೀಗೆ ನಾನಾ ವಿಷಯಗಳ ಬಗ್ಗೆ ಯೋಜನೆ ರೂಪಿಸಿ ಅದಕ್ಕೆ ಸಹಕಾರ ನೀಡುತ್ತಿದೆ, ಕಳೆದ ಹಲವು ವರ್ಷಗಳಲ್ಲಿ ಹಲವು ಕೋಟಿಗಳನ್ನು ಸಂಸ್ಥೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದೆ. ಇದೀಗ ಕಲಿಕೆಗೆ ಪೂರಕವಾದ ಗೋಡೆ ಬರಹಗಳನ್ನು ಚಿತ್ರಿಸಿ ಸಂಸ್ಥೆ ಮತ್ತೊಮ್ಮೆ ಶಿಕ್ಷಣ ಪ್ರೇಮಿಗಳ ಗಮನ ಸೆಳೆದಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಮೂಲ ಉದ್ದೇಶದಿಂದ ಪಾಠಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಗೋಡೆಯಲ್ಲಿ ಬಿಡಿಸಲಾಗಿದೆ, ಇದರಿಂದ ಮಕ್ಕಳ ಕಲಿಕೆಗೆ ತುಂಬಾ ಅನುಕೂಲವಾಗುತ್ತದೆ, ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ಅನುದಾನದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. - ವಲೆರಿಯನ್ ಲೋಬೋ, ಚಿತ್ರ ಕಲಾವಿದ https://www.vijayavani.net/foundation-stone-for-bus-stand-commercial-complex-building https://www.vijayavani.net/%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%85%e0%b2%a8%e0%b3%81%e0%b2%97%e0%b3%81%e0%b2%a3%e0%b2%b5%e0%b2%be%e0%b2%97%e0%b2%bf