ಪಹಲ್ಗಾಮ್ ದಾಳಿ; ಅಂತರರಾಷ್ಟ್ರೀಯ ತನಿಖೆಗೆ ಪಾಕಿಸ್ತಾನ ರಕ್ಷಣಾ ಸಚಿವರ ಒತ್ತಾಯ| Terror attack

kavaja
Published on

Khawaja Muhammad Asif| ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡ ಪರಿಣಾಮದಿಂದಾಗಿ ಪಾಕಿಸ್ತಾನ ಈಗಾಗಲೇ ನಲುಗಿ ಹೋಗಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಭಯೋತ್ಪಾದಕ ದಾಳಿಯಲ್ಲಿನ ತನ್ನ ಪಾತ್ರವನ್ನು ನಿರಾಕರಿಸಿದೆ. ಅಲ್ಲದೇ ಈ ಬಗ್ಗೆ ಅಂತಾರಾಷ್ಟ್ರೀಯ ತನಿಖೆಯಾಗಬೇಕೆಂದು ಒತ್ತಾಯಿಸಿದೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಪಹಲ್ಗಾಮ್​ ದಾಳಿ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಅಗತ್ಯ ಎಂದು ಹೇಳಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳು ನಡೆಸುವ ಯಾವುದೇ ತನಿಖೆಗೆ ಇಸ್ಲಾಮಾಬಾದ್ ಸಹಕರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಘಟನೆ ನಡೆದ ಕೂಡಲೇ ದೆಹಲಿಯಿಂದ ಬಂದ ಪ್ರತಿಕ್ರಿಯೆಗಳು ನಮಗೆ ಆಶ್ಚರ್ಯವನ್ನು ತರಲಿಲ್ಲ. ಎಕೆಂದರೆ ಇದನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಉಗ್ರ ಕೃತ್ಯ ಎಂದ ಕೂಡಲೇ ನಾವು ಇದನ್ನು ಖಂಡಿಸಿದ್ದೇವೆ. ಭಯೋತ್ಪಾದನೆಯಿಂದ ವಿಶ್ವದಲ್ಲಿ ಅತಿಹೆಚ್ಚು ತೊಂದರೆಗೆ ಒಳಗಾದ ದೇಶವೆಂದರೆ ಅದು ಪಾಕಿಸ್ತಾನ, ದಶಕಗಳಿಂದ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.

ನಾವು ಭಾರತಕ್ಕೆ ಹೆದರುತ್ತಿಲ್ಲ, ಒಂದು ವೇಳೆ ಅವರು ದಾಳಿ ನಡೆಸಿದರೆ, ಅದಕ್ಕೆ ಖಡಕ್ ಪ್ರತಿಕ್ರಿಯೆಯನ್ನು ನಾವು ನೀಡುತ್ತೇವೆ. ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯಕ್ಕೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ, ಬದಲಿಗೆ ಇದು ಭಾರತ ಸೃಷ್ಟಿಸಿದ ನಾಟಕ ಎಂದು ಖ್ವಾಜಾ ಆರೋಪಿಸಿದ್ದಾರೆ.

ವಿಶ್ವದ ಇತರ ಯಾವುದೇ ದೇಶಗಳು, ಪಾಕಿಸ್ತಾನ ಅನುಭವಿಸಿದ್ದಷ್ಟು ಸಾವುನೋವುಗಳನ್ನು ಅನುಭವಿಸಲಿಲ್ಲ. ಹಾಗಾಗಿ ಉಗ್ರ ಕೃತ್ಯದಿಂದಾಗುವ ನೋವುಗಳನ್ನು ಅನುಭವಿಸುವ ಅನುಭವವನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ನೆಲೆಕಂಡಿದ್ದ ಉಗ್ರರರನ್ನು ಅಮೆರಿಕಾ ಕೂಡಾ ಪ್ರಾಕ್ಸಿಯಾಗಿ ಬಳಸಿಕೊಂಡಿತು ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದಾರೆ.

(ಏಜೆನ್ಸೀಸ್)

ಪುಲ್ವಾಮಾದ ಘಟನೆಗೂ ನಮ್ಮ ಮೇಲೆ ಗೂಬೆ ಕೂರಿಸಲಾಯಿತು, ಭಾರತದ ಮಿಲಿಟರಿಗಳು ನಮ್ಮ ದೇಶದಲ್ಲಿ ದಾಳಿ ಮಾಡಿದವು. ಆ ವೇಳೆ ಅಲ್ಲಿನ ಅಧಿಕಾರಿಯೊಬ್ಬರನ್ನು ನಮ್ಮ ಸೇನೆ ವಶಕ್ಕೆ ಪಡೆದುಕೊಂಡಿತು. ಆದರೆ ನಾವು ಸೌಹಾರ್ದತೆಯ ದೃಷ್ಟಿಯಿಂದ ಅವರನ್ನು ಬಿಟ್ಟು ಕಳುಹಿಸಿದೆವು. ಈಗ ಮತ್ತೆ ನಮ್ಮ ಮೇಲೆ ಆರೋಪವನ್ನು ಮಾಡುತ್ತಿದ್ದಾರೆ ಎಂದು ಖ್ವಾಜಾ ಆಸಿಫ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net