

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿ ಆ.10, 11ರಂದು ಸಾಮೂಹಿಕ ಕಟಾಹಾಪೂಪ ಸೇವೆ (ಕಟ್ಟದಪ್ಪ ಸೇವೆ) ನಡೆಯಲಿದೆ. ಗತಕಾಲದ ‘ಆಟಿ’ ತಿಂಗಳಲ್ಲಿ ರೈತರು ಧಾರಾಕಾರವಾಗಿ ಸುರಿವ ಮಳೆಗೆ ಮನೆಯೊಳಗಿದ್ದು, ಸ್ವಾಭಾವಿಕವಾಗಿಯೇ ಗದ್ದೆಗಳಿಂದ ಉತ್ತಮ ಫಲ ಬರಲಿ ಎಂದು ಗ್ರಾಮದ ದೈವ, ದೇವರನ್ನು ಪ್ರಾರ್ಥಿಸುತ್ತಿದ್ದರು. ಕೃಷಿ ಕಾಯಕಕ್ಕಾಗಿ ಕಟ್ಟಲಾಗುತ್ತಿದ್ದ ಕಟ್ಟಗಳು ಒಡೆಯದೆ ಒಡ್ಡುಗಳ ರಕ್ಷಣೆ, ಹೇರಳ ನೀರಾಶ್ರಯವು ನಿರ್ವಿಘ್ನವಾಗಿ ದೊರೆಯಲೆಂದು ಗ್ರಾಮ ದೇವರಿಗೆ ಹರಕೆ ರೂಪದಲ್ಲಿ ಸಮರ್ಪಿಸುವ ಅಪ್ಪ ಸೇವೆಗೆ ‘ಕಟ್ಟದಪ್ಪ’ ಎಂಬ ಹೆಸರು ಪ್ರಚಲಿತವಿದೆ.
ದೊಡ್ಡ ಕಟಾಹಗಳಲ್ಲಿ ಅಪ್ಪಗಳನ್ನು ಮಹಾಗಣಪತಿಗೆ ಅರ್ಪಿಸುವುದರಿಂದ ‘ಕಟಾಹಾಪೂಪ’ವೆಂಬ ಹೆಸರು ಚಾಲ್ತಿಯಲ್ಲಿದೆ. ರಾತ್ರಿ ಪೂಜೆ ಸಂದರ್ಭ ಈ ಸೇವೆಗಾಗಿ ಬೆಳಗ್ಗೆಯಿಂದಲೇ ಬಾಣಸಿಗರು ಕಟ್ಟದಪ್ಪ ತಯಾರಿಯಲ್ಲಿ ತೊಡಗುತ್ತಾರೆ. ಬಳಿಕ ಅವುಗಳನ್ನು ದೊಡ್ಡ ಕಟಾಹದಲ್ಲಿ ತುಂಬಿ ಸಮರ್ಪಣೆಗೆ ಅಣಿಗೊಳಿಸಲಾಗುವುದು. ಪೂಜೆ, ಪ್ರಾರ್ಥನೆಗಳ ಬಳಿಕ ಸಾಮೂಹಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕೋಟೆಕಾರು, ಆನುವಂಶಿಕ ಮೊಕ್ತೇಸರಾದ ಪಿ.ಭವಾನಿ ಶಂಕರ ಹೆಗ್ಡೆ, ಪಡುಬಿದ್ರಿಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ತಿಳಿಸಿದ್ದಾರೆ.