ವ್ಯರ್ಥವಾಗುತ್ತಿದೆ ಹಾಸ್ಟೆಲ್ ಕಟ್ಟಡ : ಮಕ್ಕಳಿಲ್ಲದೆ ಪಾಳುಬಿದ್ದು ನಿರುಪಯುಕ್ತ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಒತ್ತಾಯ

New Project (39)
Published on

ಮನೋಹರ ಬಳಂಜ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಕಣಿಯೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಪದ್ಮುಂಜ ಎಂಬಲ್ಲಿರುವ ದ.ಕ.ಜಿಲ್ಲಾ ಪಂಚಾಯಿತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯ ಕಳೆದ 3-4 ವರ್ಷದಿಂದ ನಿರುಪಯುಕ್ತವಾಗಿದೆ.

ವಸತಿ ನಿಲಯದ ಸ್ವಂತ ಕಟ್ಟಡವನ್ನು 2000-01 ಸಾಲಿನಲ್ಲಿ ನಿರ್ಮಿಸಲಾಗಿದೆ. 3-4 ವರ್ಷದಿಂದ ಈ ಕಟ್ಟಡ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬಾರದೆ, ಕಟ್ಟಡದ ಸುತ್ತ ಗಿಡಗಂಟಿ, ಬಳ್ಳಿ, ಹುಲ್ಲು ಪೊದೆ ಆಳೆತ್ತರಕ್ಕೆ ಬೆಳೆದಿದೆ. ಸಂಬಂಧಪಟ್ಟ ಇಲಾಖೆಯವರು ಕೂಡ ಈ ಕಟ್ಟಡದತ್ತ ತಿರುಗಿ ನೋಡಿಲ್ಲ. ಕಟ್ಟಡದ ಅರ್ಧಭಾಗ ಹುಲ್ಲುಗಾವಲಿನಂತೆ ಕಾಣುತ್ತದೆ. ಜನರ ತೆರಿಗೆ ದುಡ್ಡನ್ನು ಸರ್ಕಾರಿ ವ್ಯವಸ್ಥೆ ಯಾವ ರೀತಿ ಪೋಲು ಮಾಡುತ್ತದೆ ಎನ್ನುವುದಕ್ಕೆ ಈ ಕಟ್ಟಡ ಉತ್ತಮ ಉದಾಹರಣೆಯಾಗಬಹುದು.

ಕಳೆದ 2-3 ವರ್ಷಗಳಿಂದ ಗಾಳಿ-ಮಳೆಗೆ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರಿ ಗೋಡೆಗಳು ಅಲ್ಲಲ್ಲಿ ಪಾಚಿ ಹಿಡಿದಿರುವುದು ಕಂಡು ಬರುತ್ತದೆ. ವಸತಿ ನಿಲಯದ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆಗೆದುರಾಗಿರುವ ಮುಖ್ಯ ದ್ವಾರದ ಬೆಲೆಬಾಳುವ ಕಬ್ಬಿಣದ ಗೇಟು ತುಕ್ಕು ಹಿಡಿದಿದೆ. ವಿದ್ಯುತ್ ಉಪಕರಣಗಳು ಅಲ್ಲಲ್ಲಿ ಮುರಿದು ನೇತಾಡಿಕೊಂಡಿರುವುದು ಕಂಡುಬರುತ್ತದೆ. ಈಗಾಗಲೇ ಕುಡುಕರ, ಕಳ್ಳರ ಕಣ್ಣು ಈ ಕಟ್ಟಡದ ಮೇಲೆ ಬಿದ್ದಿದೆ. ಕಟ್ಟಡದ ವಸ್ತುಗಳು ಕಳ್ಳರ ಪಾಲಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

ಕಣಿಯೂರು ಹಿಂದುಳಿದ ವರ್ಗಗಳ ಕಲ್ಯಾಣ ಮೆಟ್ರಿಕ್ ಪದವಿಪೂರ್ವ ಬಾಲಕಿಯರ ನಿಲಯದಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಇದ್ದರು. 2021-22ನೇ ಸಾಲಿನ ಕೋವಿಡ್ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರವಾಗಿ ಮತ್ತು ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಕಟ್ಟಡ ಬಳಕೆಯಾಗಿತ್ತು.

2021, 2022 ಮತ್ತು 2023ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ವಿದ್ಯಾರ್ಥಿನಿಯರ ಸೇರ್ಪಡೆ ಕಡಿಮೆಯಾಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳನ್ನು ತಾಲೂಕಿನ ಬೇರೆ ಬಾಲಕಿಯರ ವಸತಿ ನಿಲಯಕ್ಕೆ ಕಳುಹಿಸಿಕೊಡಲಾಗಿದೆ. ಈಗಾಗಲೇ ಖಾಲಿಯಾದ ಸುಸಜ್ಜಿತ ಕಟ್ಟಡವನ್ನು ಸ್ಥಳೀಯ ಕಣಿಯೂರು ಪಂಚಾಯತಿಯ ಅಗತ್ಯ ಕೆಲಸಕ್ಕೆ ಉಪಯೋಗಿಸಲು ಅಥವಾ ಬಾಲಕರ ವಸತಿ ನಿಲಯವಾಗಿ ಪರಿವರ್ತಿಸಲು ಮೇಲಧಿಕಾರಿಗಳಿಗೆ ಬೆಳ್ತಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕಳೆದ 2 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಸುಸಜ್ಜಿತ ಸರ್ಕಾರಿ ಕಟ್ಟಡವೊಂದು ಬಳಕೆರಹಿತವಾಗಿ ವ್ಯರ್ಥವಾಗುತ್ತಿರುವುದು ದುರಂತ. ಕಟ್ಟಡ ಶಿಥಿಲಗೊಂಡು ಬಿದ್ದು ಹೋಗುವ ಮೊದಲು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಕಳೆದ 2-3 ವರ್ಷಗಳಿಂದ ಬಾಲಕಿಯರ ದಾಖಲಾತಿ ಕಡಿಮೆಯಾಗಿ ಸರ್ಕಾರಿ ಕಟ್ಟಡ ಖಾಲಿಯಾಗಿಯೇ ಇದೆ. ಪಂಚಾಯಿತಿಯ ಅಗತ್ಯ ಕೆಲಸ ಕಾರ್ಯಗಳಿಗೆ ಸ್ಥಳಾವಕಾಶ ಕೊರತೆಯಿದೆ. ಆದುದರಿಂದ ಸಂಬಂಧಿಸಿದ ಇಲಾಖೆಯವರು ಪಂಚಾಯಿತಿಗೆ ಕಟ್ಟಡವನ್ನು ನೀಡಬೇಕೆಂದು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ.ಕಟ್ಟಡ ಶಿಥಿಲವಾಗದಂತೆ ರಕ್ಷಿಸಲು ಪಂಚಾಯಿತಿ ಬದ್ಧವಾಗಿದೆ. ಸೀತಾರಾಮ ಮಡಿವಾಳ ಅಧ್ಯಕ್ಷರು ಗ್ರಾಪಂ ಕಣಿಯೂರು. ಕೋವಿಡ್ ನಂತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ 2021-22 ಸಾಲಿನಲ್ಲಿ ಮಕ್ಕಳ ದಾಖಲಾತಿ ಕುಂಠಿತಗೊಂಡಿತು. ಅದುದರಿಂದ ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳನ್ನು ತಾಲೂಕಿನ ಹತ್ತಿರದ ವಸತಿ ನಿಲಯದಲ್ಲಿ ಸೇರಿಸಲಾಗಿದೆ. ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆಪತ್ರ ಹಾಗೂ ಪರಿಕರಗಳನ್ನು ಬೇರೆಡೆಗೆ ಕೊಂಡೊಯ್ಯಲಾಗಿದೆ. ಸದ್ಯ ಕಟ್ಟಡವನ್ನು ಯಾವುದೇ ರೀತಿಯಲ್ಲಿ ಉಪಯೋಗ ಮಾಡದೆ ಬೀಗ ಹಾಕಿಡಲಾಗಿದೆ. ಪರ್ಯಾಯ ವ್ಯವಸ್ಥೆಗೆ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಗಿದೆ. ಕಟ್ಟಡದ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲಾಗುತ್ತದೆ. ಜೋಸೆಫ್ ಪಿ.ಎಸ್. ಮುಖ್ಯಸ್ಥರು ಹಿಂದುಳಿದ ವರ್ಷಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ. https://www.vijayavani.net/application-invitation-from-scheduled-category-students https://www.vijayavani.net/honorary-doctorate-to-vamanarao-bekal

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net