ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

TULASIGOUDA DEATH
Published on

ಕಾರವಾರ/ಅಂಕೋಲಾ: ವೃಕ್ಷ ಮಾತೆ ಎಂದೇ ಹೆಸರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ(84) ಅವರು ಸೋಮವಾರ ತಮ್ಮ ಸ್ವಗ್ರಹದಲ್ಲಿ ಕೆಲ ಕಾಲದ ಅನಾರೋಗ್ಯದಿಂದ ನಿಧನರಾದರು. ಅಂಕೋಲಾ ಹೊನ್ನಾಳ್ಳಿ ಗ್ರಾಮದ ಬುಡಕಟ್ಟು ಜನಾಂಗದ ಹಾಲಕ್ಕಿ ಕುಟುಂಬದ ಅವರು ಓದು, ಬರಹ ಬಾರದಿದ್ದರೂ ಲಕ್ಷಾಂತರ ಗಿಡಗಳನ್ನು ಬೆಳೆಸಿ ಜಗತ್ತಿಗೇ ಮಾದರಿಯಾಗಿದ್ದರು. ಮೃತರು, ಪುತ್ರ, ಪುತ್ರಿ, ಹಾಗೂ ಅಪಾರ ಬಂಧುಗಳನ್ನು ಹೊಂದಿದ್ದಾರೆ.

ತಮ್ಮ 25 ನೇ ವಯಸ್ಸಿನಲ್ಲಿ ತಮ್ಮದೇ ಊರಿನ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಂಬಳಕ್ಕಾಗಿ ಗಿಡಗಳನ್ನು ಬೆಳೆಸುವ ಕಾರ್ಯ ಪ್ರಾರಂಭಿಸಿದ ತುಳಸಿ ಅವರು ನಂತರ ಪರಿಸರದ ಒಂದು ಭಾಗವಾಗಿ ಹೋದರು. ಗಿಡಗಳನ್ನು ತಮ್ಮ ಮಕ್ಕಳಂತೆ ನೋಡಲಾರಂಭಿಸಿದರು. ಬೀಜ ಹಾಕುವುದರಿಂದ ಹಿಡಿದು ಅದನ್ನು ನೆಟ್ಟು, ನೀರು ಹಾಕಿ ಬೆಳೆಸಿ,ರಕ್ಷಿಸಿ ಮರವಾಗಿಸುವವರೆಗೆ ಕಾಳಜಿ ವಹಿಸಿದರು. ಇದೇ ರೀತಿ 30 ವರ್ಷದಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಇವರದ್ದು. ಪರಿಣಾಮ ಅವರು ಅರಣ್ಯದ ಗಿಡಗಳ ಪ್ರಭೇದ, ಅವುಗಳ ಬೆಳೆಸುವ ವಿಧಾನ, ಉಪಯುಕ್ತತೆಯ ಮಾಹಿತಿಯ ಕಣಜದಂತಾದರು.

ಮನೆಯಲ್ಲಿ ಕಾಡುತ್ತಿದ್ದ ಬಡತನ ನನ್ನನ್ನು ನರ್ಸರಿ ಕೆಲಸಕ್ಕೆ ಕೊಂಡೊಯ್ದಿತು. ‘ಪ್ರಾರಂಭದಲ್ಲಿ ನನಗೆ ದಿನಕ್ಕೆ 1 ರೂ. ಸಂಬಳ ನೀಡುತ್ತಿದ್ದರು. ದಿನ ಕಳೆಯುತ್ತಿದ್ದಂತೆ ನನಗೆ ಗಿಡ-ಮರಗಳ ಮೇಲೆ ಪ್ರೀತಿ ಮೂಡಲು ಕಾರಣವಾಯಿತು’ ಅದೇ ಗಿಡ ಬೆಳೆಸಿ, ಉಳಿಸಿ ಎಂದು ತಮ್ಮ ಕೊನೆಯ ಉಸಿರಿರುವವರೆಗೂ ಸಾರುತ್ತ ಬಂದರು.

 ಪದ್ಮಶ್ರೀ ಪ್ರಶಸ್ತಿ: ತುಳಸಿ ಗೌಡರ ಪರಿಸರದ ಕಾಳಜಿಗಾಗಿ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದ್ದವು. 1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2020 ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಬರಿಗಾಲಲ್ಲಿ ತೆರಳಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಅವರು ಅಚ್ಚರಿ ಮೂಡಿಸಿದ್ದರು. ಅದಕ್ಕೂ ಮುಂಚೆ ಅವರಿಗೆ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಲಭಿಸಿತ್ತು. ಅಲ್ಲದೆ, ಮಂಡ್ಯ ಜಿಲ್ಲೆಯ ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಸಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ನಿಡುಮಾಮಿಡಿ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅಕ್ಷರವನ್ನೇ ಕಲಿಯದಾಕೆಯ ಪಾಠ ಪುಸ್ತಕದಲ್ಲಿ:  ತುಳಸಿ ಗೌಡ ಅಕ್ಷರ ಕಲಿತವರಲ್ಲ ಆದರೆ, ಅವರ ಕುರಿತ ಪಾಠ ಪ್ರಾಥಮಿ ಹಾಗೂ ವಿಶ್ವ ವಿದ್ಯಾಲಯದ ಪಠ್ಯದಲ್ಲಿ ಅಳವಡಿಸಲಾಗಿದೆ. ಅವರ ಪರಿಸರ ಪ್ರೇಮದ ಕುರಿತಾಗಿ 6ನೇ ತರಗತಿಯ ವಿದ್ಯಾರ್ಥಿಗಳ ಪಠ್ಯದಲ್ಲಿ ಪಾಠವೊಂದನ್ನು ಸೇರಿಸಲಾಗಿತ್ತು. ಅವರುನ್ನು ವಿವಿಧ ಕ ಅವರು ಸ್ಥಳೀಯ ವಿದ್ಯಾರ್ಥಿಗಳು ಆಗಾಗ ಅವರ ಮನೆಗೆ ಬಂದು ಭೇಟಿಯಾಗುತ್ತಾರೆ. ಮಕ್ಕಳು ಪರಿಸರದ ಬಗ್ಗೆ ಕೇಳುವಾಗ ತುಳಸಿ ಗೌಡರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮಕ್ಕಳೊಂದಿಗೆ ಪರಿಸರದ ಬಗ್ಗೆ ಮತ್ತು ಗಿಡ-ಮರಗಳ ಕುರಿತು ತನ್ನ ಅನುಭವವನ್ನು ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net