

ಸುಳ್ಯ: ಶಾಲಾ ಆಟದ ಮೈದಾನವನ್ನೇ ಭತ್ತದ ಗದ್ದೆಯನ್ನಾಗಿ ಪರಿವರ್ತಿಸಿದ ನಗರದ ಸ್ನೇಹ ಶಾಲಾ ಆಡಳಿತವನ್ನು, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಪ್ರಶಂಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಲಾ ಅಧ್ಯಕ್ಷ ಚಂದ್ರಶೇಖರ ದಾಮ್ಲೆ, ಮಕ್ಕಳ ಜ್ಞಾನಾಭಿವೃದ್ಧಿಗಾಗಿ ನೀರು ನಿಲ್ಲುವ ಶಾಲಾ ಆಟದ ಮೈದಾನವನ್ನು ಭತ್ತದ ಗದ್ದೆಯಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿದ್ದರು. ಒಟ್ಟು ಎರಡು ಗದ್ದೆಯಲ್ಲಿ ಭತ್ತದ ಪೈರನ್ನು ನೆಟ್ಟು ಕೆಲದಿನಗಳ ಹಿಂದೆ ಒಂದು ಗದ್ದೆಯ ಪೈರನ್ನು ಕಟಾವು ಮಾಡಲಾಗಿತ್ತು. ಈ ಮೂಲಕ ಭತ್ತ ಬೆಳೆಯುವ ರೀತಿ ಹಾಗೂ ಅದು ಅಕ್ಕಿಯಾಗಿ ಪರಿವರ್ತನೆಗೊಳ್ಳುವ ಬಗೆಯನ್ನು ಮಕ್ಕಳಿಗೆ ತಿಳಿಸಿಕೊಡಲಾಗಿತ್ತು.
ವಿಜಯವಾಣಿ ಈ ವಿಷಯವನ್ನು ಕೆಲ ದಿನಗಳ ಹಿಂದೆ ವಿಶೇಷ ವರದಿಯಾಗಿ ಪ್ರಕಟಿಸಿತ್ತು. ಆಟದ ಮೈದಾನವೇ ಗದ್ದೆಯಾಗಿ ಪರಿವರ್ತನೆಗೊಂಡ ಬಗೆಯ ಚಿತ್ರವನ್ನು ಇದೇ ಶಾಲೆಯ ಹಳೇ ವಿದ್ಯಾರ್ಥಿನಿಯೋರ್ವರು ಕೃಷಿ ಸಚಿವರ ಕಚೇರಿಗೆ ಕಳುಹಿಸಿದ್ದರು. ಸಚಿವರು ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಇದೊಂದು ಮಾದರಿ ಕಾರ್ಯಕ್ರಮ ಎಂದು ಹೊಗಳಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಕಾರ್ಯಚಟುವಟಿಕೆ ಗಮನಿಸಿ ಕೃಷಿ ಸಚಿವರೇ ಪ್ರಶಂಸಿರುವುದು ಹೆಮ್ಮೆಯ ಕ್ಷಣ ಎಂದು ಶಾಲಾ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ತಿಳಿಸಿದ್ದಾರೆ.