

ಇಂದೋರ್ (ಮಧ್ಯಪ್ರದೇಶ): ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ದನ ಹಾಗೂ ಹಂದಿ ಮಾಂಸದ ಕೊಬ್ಬು, ಮೀನಿನ ಎಣ್ಣೆ ಅಲ್ಲದೆ ಪಾಮ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಮುಂತಾದ ಅಂಶಗಳು ಇರುವುದು ಲ್ಯಾಬ್ ಪರೀಕ್ಷೆಯಿಂದ ಬಹಿರಂಗವಾದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಬರೋಬ್ಬರಿ 5,520 ಕೆ.ಜಿ.ನಕಲಿ ತುಪ್ಪ ಪತ್ತೆಯಾಗಿದೆ.
ಗುರುವಾರ ಇಂದೋರ್ನ ಖಾಸಗಿ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಆಹಾರ ಇಲಾಖೆಯ ಅಧಿಕಾರಿಗಳು 5,520 ಕೆ.ಜಿ. ನಕಲಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವೀರ್ ಸಾವರ್ಕರ್ ನಗರದ ಮನೆಯೊಂದರಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 7 ಲಕ್ಷ ಮೌಲ್ಯದ 5,520 ಕೆ.ಜಿ. ನಕಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಮನೀಶ್ ಸ್ವಾಮಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ, ತಾಳೆ ಎಣ್ಣೆ, ಸೋಯಾಬಿನ್ ಎಣ್ಣೆ ಮತ್ತು ಇತರ ಎಣ್ಣೆಯನ್ನು ಬೆರಸಿ ಈ ತುಪ್ಪವನ್ನು ತಯಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ನಕಲಿ ತುಪ್ಪವನ್ನು ವಿವಿಧ ಸ್ಥಳೀಯ ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಕಲಿ ತುಪ್ಪದ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.