ಕಲಾಪದ ವೇಳೆ ಅಶಿಸ್ತಿನ ವರ್ತನೆ; ವಿರೋಧ ಪಕ್ಷದ 30 ಸಂಸದರು ಅಮಾನತು

Parliament Session
Published on

ನವದೆಹಲಿ: ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್​ ಷಾ ಅವರು ಸದನಕ್ಕೆ ಉತ್ತರ ಕೊಡಬೇಕೆಂದು ಆಗ್ರಹಿಸಿ ಗದ್ದಲ ಎಬ್ಬಿಸಿದ ಆರೋಪದ ಮೇಲೆ ವಿರೋಧ ಪಕ್ಷದ 30 ಸಂಸದರನ್ನು ಅಮಾನತು ಮಾಡಲಾಗಿದೆ. ಕಳೆದ ವಾರ ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಚರ್ಚಿಸಲು ಅವಕಾಶ ಕೋರಿ ಗದ್ದಲ ಎಬ್ಬಿಸಿದ ಆರೋಪದ ಮೇಲೆ ವಿರೋಧ ಪಕ್ಷದ 15 ಸಂಸದರನ್ನು ಅಮಾನತು ಮಾಡಲಾಗಿತ್ತು.

ಕಲಾಪದ ವೇಳೆ ಆಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಈವರೆಗೆ ಒಟ್ಟು 46 ಮಂದಿ ಅಮಾನತುಗೊಂಡಿದ್ದು, ಇದರಲ್ಲಿ 43ಮಂದಿ ಭದ್ರತಾ ಲೋಪದ ಕುರಿತು ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಗದ್ದಲ ಎಬ್ಬಿಸಿ ಅಮಾನತುಗೊಂಡಿದ್ದಾರೆ.

ಅಮಾನತುಗೊಂಡ ಸಂಸದರ ಪೈಕಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ತೃಣಮೂಲ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ ಮತ್ತು ಸತಾಬ್ದಿ ರಾಯ್ ಮತ್ತು ಡಿಎಂಕೆ ಸದಸ್ಯರಾದ ಎ ರಾಜಾ ಮತ್ತು ದಯಾನಿಧಿ ಮಾರನ್ ಸೇರಿದಂತೆ ವಿರೋಧ ಪಕ್ಷದ ಅನೇಕ ಸಂಸದರು ಒಳಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌಧರಿ, ಸರ್ಕಾರ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದು, ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಸಂಸತ್ತನ್ನು ಬಿಜೆಪಿ ತನ್ನ ಕೇಂದ್ರ ಕಚೇರಿ ಎಂದು ಭಾವಿಸಿದೆ. ಅಧಿವೇಶನ ಆರಂಭವಾದಾಗಿನಿಂದಲೂ ವಿಪಕ್ಷಗಳು ಸುಗಮ ಕಲಾಪಕ್ಕೆ ಸಹಕಾರ ಕೊಟ್ಟರೂ ಈ ರೀತಿ ಮಾಡುತ್ತಿರುವುದು ಖಂಡನೀಯ.

ದೇಶದಲ್ಲಿ ನಡೆಯುತ್ತಿರುವ ಗಂಭೀರ ವಿಚಾರಗಳ ಬಗ್ಗೆ ಚರ್ಚೆಗೆ ವಿಪಕ್ಷಗಳು ಸಿದ್ದವಿದ್ದು, ಮಾಧ್ಯಮಗಳ ಮುಂದೆ ಮಾತನಾಡುವವರು ಸಂಸತ್ತಿನಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಹೆದರುತ್ತಿರುವುದೇಕೆ. ಸುದೀರ್ಘ ಚರ್ಚೆಗೆ ಆಗ್ರಹಿಸಿದ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿರುವುದು ಖಂಡನೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌಧರಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net