ನಮ್ಮ ಮೆಟ್ರೋಗೆ ಕೆಂಪೇಗೌಡರ ಹೆಸರಿಡಲಿ:ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯ

swamiji
Published on

ಬೆಂಗಳೂರು: ನಮ್ಮ ಮೆಟ್ರೋ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ರಾಜ್ಯ ಒಕ್ಕಲಿಗರ ಸಂಘ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣ ಹೆಸರನ್ನು ದೊಡ್ಡ ಯೋಜನೆಗಳಿಗೆ ಇಡಲು ಅವಕಾಶವಿದೆ. ಆದರೆ, ಬೆಂಗಳೂರು ಕಟ್ಟಿರುವ ಕೆಂಪೇಗೌಡರ ಹೆಸರನ್ನು ರಾಜಧಾನಿಯಲ್ಲಿ ಚಿರಸ್ಥಾಯಿಯಾಗಿಸಲು ನಮ್ಮ ಮೆಟ್ರೋಗೆ ಇಡಬೇಕು. ಈ ಬಗ್ಗೆ 12 ವರ್ಷಗಳಿಂದ ಸರ್ಕಾರಗಳಿಗೆ ಮನವಿ ಮಾಡಿಕೊಂಡು ಬರುತ್ತಿದ್ದೇವೆ. ಸಂಘದಿಂದ ಮತ್ತೊಂದು ವೈದ್ಯಕೀಯ ಕಾಲೇಜು ನಿರ್ಮಿಸಿ, ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿಡಬೇಕು. ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟ್ ಕೊಡಬೇಕು ಎಂದು ಅಹವಾಲು ಸಲ್ಲಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 2,592 ವಿದ್ಯಾರ್ಥಿಗಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ನಟ ಶ್ರೀನಗರ ಕಿಟ್ಟಿ, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ, ಗೌರವಾಧ್ಯಕ್ಷರಾದ ಡಿ. ಹನುಮಂತಯ್ಯ, ಎಲುವಹಳ್ಳಿ ಎನ್. ರಮೇಶ್, ಕಾರ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ಸೇರಿ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಅಂಕದ ಜತೆ ಸಂಶೋಧನೆಗೂ ಆದ್ಯತೆ ನೀಡಿ:

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುತ್ತಿದೆ. ಸಮುದಾಯದ ಜನರು ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ‘ಹಿಂದು’ ಮತ್ತು ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದೇ ಬರೆಸಬೇಕು. ಇದು ಸರ್ಕಾರದಿಂದ ಹೆಚ್ಚಿನ ಸವಲತ್ತು ಪಡೆಯಲು ಅನುಕೂಲವಾಗಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಹಕಾರದಿಂದ ಸರ್ಕಾರಕ್ಕೆ ಕಟ್ಟಬೇಕಿದ್ದ ಕೋಟ್ಯಂತರ ರೂ. ಬಡ್ಡಿ ಮನ್ನಾವಾಗಿದೆ. ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಹೆಚ್ಚಿನ ಜನರು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜನಾಂಗದ ಅಭಿವೃದ್ಧಿಗಾಗಿ ತೊಡಗಿದೆ. ಮಕ್ಕಳಿಗೆ ಶಿಕ್ಷಣ ಎಂಬುದು ಬಹಳ ಮುಖ್ಯ. ಬರೀ ಅಂಕಕ್ಕೆ ಒತ್ತು ನೀಡದೆ ಸಂಶೋಧನೆಗೂ ಆದ್ಯತೆ ನೀಡಬೇಕು ಎಂದು ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘ ಯಾವುದೇ ಧರ್ಮವನ್ನು ಅನುಸರಿಸದೇ ಜಾತ್ಯಾತೀತವಾಗಿ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಬೆಂಗಳೂರನ್ನು ಕಟ್ಟಿದ್ದ ಕೆಂಪೇಗೌಡರು ತಮ್ಮ ಮೌಲ್ಯಗಳ ಮೂಲಕ ಸಮಾಜದಲ್ಲಿ ಜೀವಂತವಾಗಿದ್ದಾರೆ. ಸರ್ವ ಜನಾಂಗದ ಹಿತವನ್ನು ಸಂಘ ಕಾಪಾಡುತ್ತಿದೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದಿದ್ದು, ಸಾಂಸ್ಕೃತಿಕವಾಗಿಯೂ ಇನ್ನಷ್ಟು ಮುಂದೆ ಬರಬೇಕಿದೆ.

ಡಾ. ಜಯಪ್ರಕಾಶ್‌ಗೌಡ, ಸಾಹಿತಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net