ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪ್ರಸ್ತಾವಕ್ಕೆ ವಿರೋಧ; ನಾಗರಿಕ ವೇದಿಕೆಯಿಂದ ಜಾಗೃತಿ ಸಮಾವೇಶ

10 ಎಸ್ಕೆಪಿ 1d
ಶಿಕಾರಿಪುರದಲ್ಲಿ ಮೆರವಣಿಗೆಗೂ ಮುನ್ನ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಗೋಪೂಜೆ ನೆರವೇರಿಸಿದರು.
Published on

ಶಿಕಾರಿಪುರ: ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದು ಇದಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಪ್ರಸ್ತಾಪವೇ ಸಾಕ್ಷಿ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಹೇಳಿದರು.

ಸಾಂಸ್ಕೃತಿಕ ಭವನದಲ್ಲಿ ಸೋಮವಾರ ನಾಗರಿಕ ವೇದಿಕೆ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಬೇರೆ ಧರ್ಮದವರನ್ನು ಓಲೈಸಲು ಹಿಂದು ಹಿತವನ್ನು ಬಲಿಗೊಡುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಹಿಂದುಗಳಾದ ನಮಗೆ ಗೋವು ಅತ್ಯಂತ ಪವಿತ್ರ. ಗೋವಿನಲ್ಲಿ ನಾವು ಕೋಟ್ಯಂತರ ದೇವರನ್ನು ಕಾಣುತ್ತೇವೆ. ಅದು ಪೂಜ್ಯನೀಯ, ಅದರ ಆರಾಧನೆ ಮಾಡುತ್ತೇವೆ. ಗೋಹತ್ಯೆ ಮೂಲಕ ಹಿಂದುಗಳ ಭಾವನೆಗಳಿಗೆ ಪೆಟ್ಟುಕೊಡುವಂತಹ ಕೆಲಸ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ಮತ್ತು ಪ್ರಹಾರವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಹುಸಂಖ್ಯಾತ ಹಿಂದುಗಳು ಬದುಕುವುದು ದುಸ್ತರವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ವಿಶ್ವದಲ್ಲೇ ಪರಮಶ್ರೇಷ್ಠ ಮತ್ತು ಗುರು ಸ್ಥಾನದಲ್ಲಿರುವ ಹಿಂದು ಧರ್ಮವನ್ನು ಘಾಸಿಗೊಳಿಸುವ ಮತ್ತು ಹಿಂದುಗಳಲ್ಲಿ ಅನಗತ್ಯ ಭಯ ಹುಟ್ಟಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಧರ್ಮ ಮತ್ತು ಭಾವನೆಗಳ ಮೇಲೆ ಪ್ರಹಾರವಾದಾಗ ಹಿಂದುಗಳು ಜಾಗೃತರಾಗಬೇಕು ಎಂದರು.
ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ, ಜಿಲ್ಲಾ ಸಂಚಾಲಕ ದೇವರಾಜ್, ಪ್ರದೀಪ ಪುನೇದಹಳ್ಳಿ, ಲೋಕೇಶ್, ಎಸ್.ವಿ.ಕೆ.ಮೂರ್ತಿ, ವಿಎಚ್‌ಪಿ ಉಪಾಧ್ಯಕ್ಷ ಪ್ರಕಾಶ್ ಜನ್ನು ಇತರರಿದ್ದರು.

ಶಿಕಾರಿಪುರ ಸ್ವಯಂ ಪ್ರೇರಿತ ಬಂದ್
ಕಾರ್ಯಕ್ರಮಕ್ಕೂ ಮುನ್ನ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಗೋ ಪೂಜೆ ಸಲ್ಲಿಸಿದರು. ನಂತರ ಸರ್ಕಾರ ಹಿಂದು ವಿರೋಧಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ವಿವಿಧ ಹಿಂದುಪರ ಸಂಘಟನೆಗಳು ಶಿವಗಿರಿ ಕಲ್ಯಾಣ ಮಂಟಪದಿಂದ ಹೊರಟು ಬಸ್ ನಿಲ್ದಾಣ, ಕಿರಣ್ ಟಾಕೀಸ್ ಸರ್ಕಲ್, ಜಯಶ್ರೀ ಟಾಕೀಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದವು. ಮಾರ್ಗದುದ್ದಕ್ಕೂ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಗೋಹತ್ಯೆ ನಿಲ್ಲಿಸಿ ಗೋವನ್ನು ರಕ್ಷಿಸಿ, ಜೈ ಶಿವಾಜಿ, ಜೈ ಭವಾನಿ, ಜೈ ಭಗತ್ ಸಿಂಗ್ ಘೋಷಣೆಗಳು ಮಾರ್ದನಿಸಿದವು. ಬಹುತೇಕ ಅಂಗಡಿ ಮುಂಗ್ಗಟ್ಟುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net