

ವಿಜಯಪುರ: ಪರಿಶಿಷ್ಟ ಪಂಗಡದ ಪಟ್ಟಿಗೆ ಅನ್ಯ ಸಮುದಾಯಗಳ ಸೇರ್ಪಡೆ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಶ್ರೀ ಮಹರ್ಷಿ ವಾಲ್ಮಿಕಿ ನಾಯಕ ಮಹಾಸಭಾದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ರವಿ ಬಿಸನಾಳ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹೆಸರಲ್ಲಿ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪಡೆಯುತ್ತಿದ್ದಾರೆ. ಅಲ್ಲದೇ, ಇದೀಗ ರಾಜ್ಯ ಸರ್ಕಾರ ಮತ್ತೆ ಅನ್ಯ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಹೊರಟಿದೆ. ಇದರಿಂದ ಮೂಲ ಪಂಗಡಗಳಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದು 7 ದಶಕ ಕಳೆದರೂ ಪರಿಶಿಷ್ಟ ಪಂಗಡ ಜನ ನಿರಂತರವಾಗಿ ಶೋಷಣೆಗೊಳಗಾಗುತ್ತಲೇ ಇದ್ದಾರೆ. ದಬ್ಬಾಳಿಕೆ, ದೌರ್ಜನ್ಯಗಳು ಮತ್ತು ಮೀಸಲಾತಿಯ ವಂಚನೆಯ ಪ್ರಕರಣಗಳ ಹೆಚ್ಚಾಗುತ್ತಲೇ ಇರುವುದು ಖಂಡನೀಯ. ಭಾರತ ಸರ್ಕಾರ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 38 ರಲ್ಲಿ ನಾಯಕ ಬುಡಕಟ್ಟುವಿನ ಪರ್ಯಾಯ ಹೆಸರುಗಳಾದ ಪರಿವಾರ ಮತ್ತು ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಸಲಾಗಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 1ರ ಕ್ರಮ ಸಂಖ್ಯೆ 6 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗೆ ಸೇರಿ ಹಿಂದೆ ತಳವಾರಿಕೆ ವೃತ್ತಿ ಮಾಡಿಕೊಂಡಿದ್ದವರು ಪ್ರಮಾಣ ಪತ್ರ ಪಡೆಯುತ್ತಿದ್ದಾರೆಂದು ಆಪಾದಿಸಿದರು.
ಅಧಿಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನಾಯಕ ತಳವಾರ ಹೆಸರಿನಲ್ಲಿ 2 ಲಕ್ಷಕ್ಕೂ ಹೆಚ್ಚಿಗೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಅನೇಕ ಸೌಲಭ್ಯಗಳನ್ನು ವಾಮ ಮಾರ್ಗದಲ್ಲಿ ಪಡೆಯಲಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮುಂದುವರೆದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಕಳೆದ ಒಂದು ವರ್ಷದಿಂದ ಸ್ವತಂತ್ರ ಸಚಿವರನ್ನು ನೇಮಕ ಮಾಡದೇ ಇರುವುದು, ಅನುದಾನ ಒದಗಿಸದೇ ಇರುವುದು ಪರಿಶಿಷ್ಟ ಪಂಡಗದ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದರು.
ಮುಖಂಡರಾದ ಬಿ.ಎಸ್. ಗಸ್ತಿ, ಅಶ್ವತ ರೇಬಿನಾಳ, ಹರೀಶ ಕೌವಲಗಿ, ಸದಾಶಿವ ಕೊನ್ನೂರ, ಲಾಯಪ್ಪ ದಳವಾಯಿ, ವಿಠ್ಠಲ ಬಂಗಾರೆಪ್ಪಗೋಳ, ಅಶೋಕ ಬಿರಾದಾರ, ಶಾಸಪ್ಪ ಹಂಚನಾಳ, ಬಾಪು ಜಾನಮಟ್ಟಿ, ಮಲ್ಲಿನಾಥ ಕೌವಲಗಿ, ಶಿವಾನಂದ ಹಿಪ್ಪರಗಿ, ಬಾಳಾಸಾಬ ಹಂಚನಾಳ, ಬಸವರಾಜ ಬಿರಾದಾರ, ತೊಂಡೆನ್ನವರ, ಕೆ.ಎಚ್. ವೀರಣ್ಣ, ಪುಂಡಲೀಕ ವಾಲಿಕಾರ, ಚಂದ್ರಕಾಂತ ಮಾನೆ ಮತ್ತಿತರರಿದ್ದರು.