

ಚಿಕ್ಕಬಳ್ಳಾಪುರ: ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ದೇಶದ ಗಡಿ ಭಾಗಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆಗಳು ಅಲಾರ್ಟ್ ಆಗಿದ್ದು ರಜೆಯಲ್ಲಿದ್ದ ಯೋಧರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಇದರಿಂದ ಗಡಿಬಿಡಿಯಲ್ಲಿ ಯೋಧರು ಊರುಗಳಿಂದ ತೆರಳುತ್ತಿದ್ದಾರೆ. ಮದುವೆ, ಕುಟುಂಬಸ್ಥರ ಅನಾರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ರಜೆಗಾಗಿ ಬಂದವರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹಾಗೆಯೇ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದ ನಿವಾಸಿ ನಿವೃತ್ತ ಸಿಆರ್ ಪಿಎ ಯೋಧ ಗೋಪಾಲಪ್ಪ ಅವರ ಪತ್ನಿ, ಸಿಆರ್
ಪಿಎ ಮಹಿಳಾ ಎಎಸ್ಐ ಕೆ.ಎ. ಕಲ್ಯಾಣಿ ಅವರು ತುರ್ತು ಕರೆ ಹಿನ್ನೆಲೆಯಲ್ಲಿ ದೇಶ ಸೇವೆಗಾಗಿ ಅಸ್ಸಾಂನ ಗುವಾಹಟಿಗೆ ತೆರಳಿದರು.
ಕಲ್ಯಾಣಿ ಅವರು 1994ರಲ್ಲಿ ಸಿಆರ್ಪಿಎ (ಅಸ್ಸಾಂ)ನಲ್ಲಿ ಎಎಸ್ಐ ಆಗಿ ಆಯ್ಕೆಯಾಗಿದ್ದು, ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು.
ಪತಿ ಸಿಆರ್ಪಿಎನಲ್ಲಿ ಯೋಧರಾಗಿದ್ದು ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ನಾನು ರಜೆಯಲ್ಲಿ ಊರಿಗೆ ಬಂದಿದ್ದೆ. ಪ್ರಸ್ತುತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಯುತ್ತಿದ್ದು, ಮೇಲಧಿಕಾರಿಗಳಿಂದ ಕರೆ ಬಂದ ಹಿನ್ನೆಲೆಯಲ್ಲಿ ತುರ್ತಾಗಿ ದೇಶ ರಕ್ಷಣೆ ಕಾರ್ಯಕ್ಕೆ ತೆರಳುತ್ತಿದ್ದೇನೆ ಎಂದು ಕಲ್ಯಾಣಿ ತಿಳಿಸಿದರು.
ಪತಿ ಗೋಪಾಲಪ್ಪ ಹಾಗೂ ಸ್ನೇಹಿತರು ಕಲ್ಯಾಣಿ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
ದೇಶ ರಕ್ಷಣೆಗಾಗಿ ಕರೆ ಬಂದರೆ ನಾನು ಸಹ ತೆರಳಲು ಸಿದ್ಧ ಎಂದು ಗೋಪಾಲಪ್ಪ ತಿಳಿಸಿದರು.