ಆನ್​ಲೈನ್​ನಲ್ಲಿ ಕಾಂಡೋಮ್​ ಖರೀದಿ ಜೋರು:ರಾತ್ರಿ 10ರಿಂದ 11ರವರೆಗೆ ಬುಕಿಂಗ್​ ಜಾಸ್ತಿ

swiggy
Published on

ಬೆಂಗಳೂರು: ಬದಲಾದ ಕಾಲಟ್ಟದಲ್ಲಿ ಯಾವುದೇ ವಸ್ತು ಬೇಕಾದರೂ ಆನ್​ಲೈನ್​ನಲ್ಲಿ ಸಿಗುತ್ತದೆ. ಅದರಂತೆ, ಈ ಬಾರಿ ರಾಜಧಾನಿ ಜನರು, ಆಹಾರ ಅಥವಾ ದಿನಸಿ ಸಾಮಗ್ರಿ ಬದಲು ಆನ್​ಲೈನ್​ನಲ್ಲಿ ಅತಿ ಹೆಚ್ಚು ಕಾಂಡೋಮ್,​ ಒಳಉಡುಪುಗಳನ್ನು ಖರೀದಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ರಾತ್ರಿ 10 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಆನ್​ಲೈನ್​ನಲ್ಲಿ ಹೆಚ್ಚು ಕಾಂಡೋಮ್​ ಬುಕಿಂಗ್​ ಆಗಿದೆ. ಈ ಮೂಲಕ ಹೆಚ್ಚು ಕಾಂಡೋಮ್​ ಮಾರಾಟ ಹೊಂದಿರುವ ದೇಶದ ಇತರೆ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಒಳಉಡುಪು ಮಾರಾಟದಲ್ಲೂ ಸಿಲಿಕಾನ್​ ಸಿಟಿಗೆ ಪ್ರಥಮ ಸ್ಥಾನ ಸಿಕ್ಕಿದೆ. 2024ರ ಸ್ವಿಗ್ಗಿ ಇನ್​ಸ್ಟಾ ಬಿಡುಗಡೆ ಮಾಡಿರುವ ವಾರ್ಷಿಕ ಅಂಕಿಅಂಶದಲ್ಲಿ ಈ ವಿಚಾರ ಬಹಿರಂಗವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಪೂಜಾ ಸಾಮಗ್ರಿ ಖರೀದಿಯಲ್ಲಿ ರಾಜಧಾನಿ ಉತ್ತಮವಾಗಿದೆ. ವಾಣಿಜ್ಯ ನಗರಿ ಮುಂಬೈ, ಹೈದರಾಬಾದ್​ಗಳನ್ನು ಹಿಂದಿಕ್ಕಿದೆ.

ಮಸಾಲೆ ಚಿಪ್ಸ್​, ಕುರ್ಕುರೆ ಖರೀದಿ:

2024ರಲ್ಲಿ ಪ್ರತಿ 140 ಅರ್ಡರ್​ಗಳ ಪೈಕಿ ಒಂದು ಲೈಂಗಿಕತೆ ಸಂಬಂಧಪಟ್ಟಂತೆ ಉತ್ಪನ್ನ ಬುಕಿಂಗ್​ ಆಗುತ್ತಿತ್ತು. ತಡರಾತ್ರಿಯಲ್ಲಿ ಕಾಂಡೋಮ್​ ಜತೆಗೆ ಮಸಾಲೆ ಚಿಪ್ಸ್​, ಕುರ್ಕುರೆ ಸಹ ಆರ್ಡರ್​ ಮಾಡಿದ್ದಾರೆ. ರಹಸ್ಯ ಅರ್ಡರ್​ಗಳು ರಾತ್ರಿ ವೇಳೆ ಹೆಚ್ಚಾಗಿ ಇರುತ್ತದೆ. ಸ್ವಿಗ್ಗಿ ಇನ್​ಸ್ಟಾ ಮಾರ್ಟ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಳಉಡುಪುಗಳ ಮಾರಾಟವೂ ರಾಜಧಾನಿಯಲ್ಲೇ ನಡೆದಿದೆ. ಹೈದರಾಬಾದ್​, ಮುಂಬೈಗಿಂತ ಬೆಂಗಳೂರಿಗರು ಅಧಿಕ ಒಳ ಉಡುಪುಗಳನ್ನು ತರಿಸಿಕೊಂಡಿದ್ದಾರೆ ಎಂದು ಸ್ವಿಗ್ಗಿ ಹೇಳಿದೆ. ಬೆಂಗಳೂರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ವಸ್ತುಗಳು, ಪಾರ್ಟಿಗೆ ಬೇಕಾದ ಉತ್ಪನ್ನ ತರಿಸಿಕೊಂಡಿದ್ದಾರೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಬಳಕೆದಾರರು, ದೀಪಾವಳಿ ಸಂದರ್ಭದಲ್ಲಿ 1.8 ಪಟ್ಟು ಹೆಚ್ಚು ವೈನ್​, ಶಾಟ್​ ಗ್ಲಾಸ್​ ಮತ್ತು ಟೂತ್​ಬ್ರಷ್​ಗಳನ್ನು ಅರ್ಡರ್​ ಮಾಡಿದ್ದಾರೆ.

ಪಾಸ್ತಾಕ್ಕಾಗಿ 49,900 ವ್ಯಯ

ಸ್ವಿಗ್ಗಿ ಇನ್​ಸ್ಟಾ ಮಾರ್ಟ್​ನಲ್ಲಿ ಅಗತ್ಯ ವಸ್ತುಗಳ ಆರ್ಡರ್​ ಮಾಡುವ ವಿಚಾರದಲ್ಲಿ ಮುಂಬೈ, ಹೈದರಾಬಾದ್​ ಮತ್ತು ದೆಹಲಿಯಂತಹ ನಗರಗಳಿಗೆ ಬೆಂಗಳೂರು ಕಠಿಣ ಸ್ಪರ್ಧೆ ನೀಡಿದೆ. ಇದರ ಜತೆಗೆ ಸ್ವಿಗ್ಗಿ, 2024ರಲ್ಲಿ ಹೆಚ್ಚಿನ ಜನರು ಆದ್ಯತೆ ನೀಡುವ ಆಹಾರ ಪದಾರ್ಥಗಳ ಅಂಕಿಅಂಶವನ್ನು ಸಹ ಬಿಡುಗಡೆ ಮಾಡಿದ್ದು, ನಗರದ ವ್ಯಕ್ತಿಯೊಬ್ಬರು ಪಾಸ್ತಾಕ್ಕಾಗಿ 49,900 ರೂ. ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

5.13 ಲಕ್ಷ ಖರ್ಚು ಮಾಡಿದ ಆಹಾರಪ್ರಿಯ

ನಗರದ ಆಹಾರಪ್ರಿಯಯೊಬ್ಬರು 2024ರಲ್ಲಿ ಒಂದೇ ರೆಸ್ಟೋರೆಂಟ್​ಗೆ 5,13,733 ರೂ. ಖರ್ಚು ಮಾಡಿದ್ದಾರೆ ಎಂದು ಆಹಾರ ವಿತರಣಾ ಸಂಸ್ಥೆಯಾದ ಜೊಮ್ಯಾಟೋ ಹೇಳಿದೆ. ಅಲ್ಲದೆ, ದೇಶದ ಅತಿ ಹೆಚ್ಚು ಜನರು ಆನ್​ಲೈನ್​ನಲ್ಲಿ ಬಿರಿಯಾನಿ ಬುಕಿಂಗ್​ ಮಾಡಿದ್ದು, 9 ಕೋಟಿಗೂ ಅಧಿಕ ಬಿರಿಯಾನಿ ಆರ್ಡರ್​ ಆಗಿವೆ. ಪ್ರತಿ ಸೆಕೆಂಡ್​ಗೆ 3 ಬಿರಿಯಾನಿ ಬುಕಿಂಗ್​ ಆಗುತ್ತಿತ್ತು. 2024ರ ಜ.1 ರಿಂದ ಡಿ.6ರವರೆಗೆ ರೆಸ್ಟೋರೆಂಟ್​ಗಳಲ್ಲಿ ಅತಿ ಹೆಚ್ಚು ಟೇಬಲ್​ಗಳನ್ನು ಕಾಯ್ದಿರಿಸಿದ್ದರು. ಫಾದರ್ಸ್​ ಡೇ ದಿನದಂದು 84,866 ಮಂದಿ ತಮ್ಮ ತಂದೆಗೆ ಒಳ್ಳೆಯ ಊಟ ಕೊಡಿಸುವ ಸಲುವಾಗಿ ರೆಸ್ಟೋರೆಂಟ್​ಗೆ ತೆರಳಿದ್ದರು. ಆಹಾರ ಪದಾರ್ಥಗಳ ಆರ್ಡರ್​ಗಳಲ್ಲಿ ದೆಹಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಮತ್ತು ಮುಂಬೈ ನಂತರ ಸ್ಥಾನದಲ್ಲಿವೆ.

5 ಕೋಟಿ ಅಧಿಕ ಪಿಜ್ಜಾ ಆರ್ಡರ್​

ದೇಶಾದ್ಯಂತ ಈ ವರ್ಷ 5,84,46,908 ಪಿಜ್ಜಾಗಳನ್ನು ಗ್ರಾಹಕರಿಗೆ ಜೊಮ್ಯಾಟೋ ವಿತರಿಸಿದೆ. ಅಧಿಕ ಮಂದಿ ಬೆಳಗ್ಗೆ 77,76,725 ಚಹಾ ತರಿಸಿಕೊಂಡಿದ್ದರೆ, 74,32,856 ಕಾಫಿ ಆರ್ಡರ್​ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net