ರಾಜ್ಯದಲ್ಲಿ ಆನ್​ಲೈನ್​ ಶಿಕ್ಷಣ ರದ್ದು: ಶಾಲಾ ಶುಲ್ಕ ಹೆಚ್ಚಳಕ್ಕೂ ಬ್ರೇಕ್​ ಹಾಕಿದ ಸರ್ಕಾರ

online_learning
Published on

ಬೆಂಗಳೂರು: ಸಾಕಷ್ಟು ಚರ್ಚೆಯಲ್ಲಿದ್ದ ಆನ್​ಲೈನ್​ ಶಿಕ್ಷಣದ ಬಗ್ಗೆ ಸರ್ಕಾರ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದು, ಈ ಕೂಡಲೇ ಎಲ್​ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ (1 ರಿಂದ 5) ತರಗತಿಗಳಲ್ಲಿ ಆನ್​ಲೈನ್​ ಶಿಕ್ಷಣವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.

ಬುಧವಾರ ತಜ್ಞರ ಜತೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್​ ಕುಮಾರ್​ ಅವರು, ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್​ಲೈನ್​ ಶಿಕ್ಷಣವನ್ನು ರದ್ದು ಮಾಡಿರುವುದಾಗಿ ತಿಳಿಸಿದರು. ಈ ಕೂಡಲೇ ಆನ್​​ಲೈನ್​ ಶಿಕ್ಷಣ ಹೆಸರಿನಲ್ಲಿ ನಡೆಯುತ್ತಿರುವ ತರಗತಿಗಳನ್ನು ನಿಲ್ಲಿಸಬೇಕು ಎಂದು ನಿರ್ದೇಶಿಸಿದರು.

ಆನ್​ಲೈನ್​ ಟೀಚಿಂಗ್​ ಹೆಸರಿನಲ್ಲಿ ಶುಲ್ಕ ತೆಗೆದುಕೊಳ್ಳುವುದನ್ನು ಈ ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಈಗಾಗಲೇ ಒಂದು ಸುತ್ತೋಲೆಯನ್ನು ಹೊರಡಿಸಿದ್ದೇವೆ. ಕೋವಿಡ್​ 19 ಎಲ್ಲ ಕುಟುಂಬಗಳನ್ನು ಆರ್ಥಿಕವಾಗಿ ಕುಗ್ಗಿಸಿದೆ. ಅನೇಕರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಅನೇಕರಿಗೆ ವೇತನದಲ್ಲಿ ಕಡಿತವಾಗಿದೆ. ವಿವಿಧ ರೀತಿಯ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಮಾನವೀಯ ದೃಷ್ಟಿಯಿಂದ ಯಾರೂ ಕೂಡ ಶಾಲಾ ಶುಲ್ಕದಲ್ಲಿ ಹೆಚ್ಚಳವನ್ನು ಮಾಡಬಾರದು ಎಂದು ಮನವಿ ಮಾಡಿದರು.

ಶಿಕ್ಷಣ ಸಂಸ್ಥೆಗಳು ಸ್ವಇಚ್ಛೆಯಿಂದ ನಿರ್ಧಾರ ಮಾಡಿದರೆ ಸ್ವಾಗತ. ಈ ವರ್ಷ ಅರ್ಧ ತರಗತಿಗಳು ನಡೆಯುವುದಿಲ್ಲವಾದ್ದರಿಂದ ಅರ್ಧ ಶುಲ್ಕವನ್ನು ಪಡೆಯುವುದಾದರೆ ಉತ್ತಮ ಎಂದು ಸಚಿವರು ಯಾವುದೇ ಕಾರಣಕ್ಕೂ ಶುಲ್ಕವನ್ನು ಮಾತ್ರ ಹೆಚ್ಚಳ ಮಾಡಬಾರದೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net