ಒಂದು ಷೇರು ಆಗಲಿದೆ 5 ಷೇರು: ಸರ್ಕಾರಿ ಬ್ಯಾಂಕ್​ ಸ್ಟಾಕ್​ ವಿಭಜನೆ ಮಾಡುತ್ತಿರುವುದೇಕೆ?

stock morket
Published on

ಮುಂಬೈ: ಸರ್ಕಾರಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಷೇರುಗಳನ್ನು ವಿಭಜನೆ ಮಾಡಲಾಗುತ್ತಿದೆ. ಕಂಪನಿಯ ಒಂದು ಷೇರನ್ನು 5 ಭಾಗಗಳಾಗಿ ವಿಭಜಿಸಲಾಗುತ್ತದೆ. ಕೆನರಾ ಬ್ಯಾಂಕ್ ಈ ಷೇರು ವಿಭಜನೆಯ ದಾಖಲೆ ದಿನಾಂಕವನ್ನು ಪ್ರಕಟಿಸಿದೆ.

10 ರೂ ಮುಖಬೆಲೆಯ ಷೇರುಗಳನ್ನು 5 ಭಾಗಗಳಾಗಿ ವಿಂಗಡಿಸಲಾಗುವುದು ಎಂದು ಬ್ಯಾಂಕ್ ಷೇರು ಮಾರುಕಟ್ಟೆಗೆ ತಿಳಿಸಿದೆ. ಈ ಷೇರು ವಿಭಜನೆಯ ನಂತರ, ಬ್ಯಾಂಕ್‌ನ ಷೇರುಗಳ ಮುಖಬೆಲೆಯು 2 ರೂ.ಗೆ ಇಳಿಯುತ್ತದೆ. ಈ ಸ್ಟಾಕ್ ವಿಭಜನೆಗೆ ದಾಖಲೆಯ ದಿನಾಂಕವಾಗಿ ಮೇ 15 ಅನ್ನು ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಅಂದರೆ ಈ ದಿನದಂದು ಷೇರುಗಳನ್ನು ವಿಭಜನೆ ಮಾಡಲಾಗುವುದು.

ಬ್ಯಾಂಕಿನ ಷೇರುಗಳ ದ್ರವ್ಯತೆ ಸುಧಾರಿಸಲು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಅವುಗಳನ್ನು ಹೆಚ್ಚು ಸುಲಭವಾಗಿಸಲು, ಸಾರ್ವಜನಿಕ ವಲಯದ ಈ ಬ್ಯಾಂಕ್​ನ ಆಡಳಿತ​ ಮಂಡಳಿಯು ಷೇರು ವಿಭಜನೆಯನ್ನು ಫೆಬ್ರವರಿಯಲ್ಲಿ ಅನುಮೋದಿಸಿದೆ. ಅಂದರೆ, ವಿಭಜನೆಯಾದ ನಂತರ ಷೇರು ಬೆಲೆ ಕಡಿಮೆಯಾಗುತ್ತದೆ ಹಾಗೂ ಚಿಲ್ಲರೆ ಹೂಡಿಕೆದಾರರು ಈ ಷೇರುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ ಎಂದುದು ಸ್ಟಾಕ್​ ವಿಭಜನೆಯ ಹಿಂದಿನ ಲೆಕ್ಕಾಚಾರವಾಗಿದೆ.

ಮಾರ್ಚ್‌ನ ಷೇರುಗಳ ಪ್ರಕಾರ, ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ ಅವರ ಪಾಲು ಶೇಕಡಾ 1.5 ರಷ್ಟಿದೆ. ಡಿಸೆಂಬರ್ 2023 ರಲ್ಲಿ, ಬ್ಯಾಂಕ್‌ನಲ್ಲಿ ರೇಖಾ ಜುಂಜುನ್‌ವಾಲಾ ಅವರ ಪಾಲು ಶೇಕಡಾ 2.1 ರಷ್ಟಿತ್ತು. ಕೇವಲ ಒಂದು ತ್ರೈಮಾಸಿಕದಲ್ಲಿ ಅವರು ತಮ್ಮ ಪಾಲನ್ನು 0.6 ಪ್ರತಿಶತದಷ್ಟು ಕಡಿಮೆ ಮಾಡಿಕೊಂಡಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸಹ ಬ್ಯಾಂಕ್‌ನಲ್ಲಿನ ತಮ್ಮ ಪಾಲನ್ನು ಕಡಿಮೆ ಮಾಡಿದ್ದಾರೆ. ಎಫ್‌ಐಐ ಪಾಲು ಶೇ. 10.57ಕ್ಕೆ ಇಳಿದಿದೆ.

ಪ್ರಸ್ತುತ ಈ ಷೇರಿನ ಬೆಲೆ ರೂ. 578.75 ಇದೆ. ಕಳೆದ 3 ತಿಂಗಳ ಅವಧಿಯಲ್ಲಿ ಕಂಪನಿಯ ಷೇರು ಮಾರುಕಟ್ಟೆಯಲ್ಲಿ 24 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ. ಈ ಷೇರಿನ ಬೆಲೆ 6 ತಿಂಗಳಲ್ಲಿ ಶೇ. 54.80 ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ, 96 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. ಕೆನರಾ ಬ್ಯಾಂಕ್ ಷೇರಿನ 52 ವಾರಗಳ ಗರಿಷ್ಠ ಬೆಲೆ 618.95 ರೂ ಮತ್ತು ಕನಿಷ್ಠ ಬೆಲೆ 282.40 ರೂ. ಇದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 821.13 ರೂ. ಹಾಗೂ ಕನಿಷ್ಠ ಬೆಲೆ ರೂ. 40.71 ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳ 1,04,983.72 ಕೋಟಿ ರೂಪಾಯಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net