

ನವದೆಹಲಿ: ಕರ್ತವ್ಯ ನಿರ್ವಹಿಸುವಾಗ ಕರೊನಾ ಸೋಂಕು ತಗುಲಿ ಸಾವಿಗೀಡಾದ ಇಬ್ಬರು ಮುಂಚೂಣಿ ಕಾರ್ಯಕರ್ತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಹಣವನ್ನು ದೆಹಲಿ ಸರ್ಕಾರ ನೀಡಿದೆ. ದೆಹಲಿಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರಾಗಿದ್ದ ಓಂಪಾಲ್ ಸಿಂಗ್ ಮತ್ತು ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ರಾಜ್ಕುಮಾರ್ ಅವರ ಕುಟುಂಬಕ್ಕೆ ಈ ಪರಿಹಾರ ಧನ ನೀಡಲಾಗಿದೆ.
ಈ ಕುಟುಂಬಗಳನ್ನು ಶುಕ್ರವಾರ (ಫೆಬ್ರವರಿ 19) ಖುದ್ದು ಭೇಟಿ ಮಾಡಿ, ಈ ಭಾರೀ ಮೊತ್ತದ ಹಣವನ್ನು ಚೆಕ್ ಮೂಲಕ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, "ದೆಹಲಿಯ ಎಲ್ಲ ಕೋವಿಡ್ ವಾರಿಯರ್ಗಳಿಗೆ ನಾನು ಸಲ್ಯೂಟ್ ಮಾಡುತ್ತೇನೆ" ಎಂದಿದ್ದಾರೆ. "ಕಳೆದ ಒಂದು ವರ್ಷ ಎಲ್ಲರಿಗೂ ಸಂಕಷ್ಟ ತಂದಿತ್ತು. ಆದರೆ ಕರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೋವಿಡ್ ವಾರಿಯರ್ಗಳು ಮುಂದಾಳತ್ವ ವಹಿಸಿದ್ದಾರೆ. ದೆಹಲಿಯ ನಾಗರಿಕರಿಗಾಗಿ ಸ್ವಾರ್ಥ ಮರೆತು ದುಡಿಯುತ್ತಿದ್ದಾರೆ" ಎಂದಿದ್ದಾರೆ.
ಕೋವಿಡ್ ಡ್ಯೂಟಿಯ ವೇಳೆ ಪ್ರಾಣ ಕಳೆದುಕೊಂಡಿರುವ ಕೋವಿಡ್ ವಾರಿಯರ್ಗಳ ಕುಟುಂಬಗಳಿಗೆ ಸರ್ಕಾರ ಈಗಾಗಲೇ 1 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಅವರ ನೋವನ್ನು ಕಡಿಮೆ ಮಾಡಲಾಗದಿದ್ದರೂ ಈ ಹಣದಿಂದ ಅವರಿಗೆ ಆರ್ಥಿಕ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದಿವಂಗತ ಓಂ ಪಾಲ್ ಸಿಂಗ್ ಅವರು ದೆಹಲಿಯ ಕಲ್ಯಾಣಪುರಿಯ ಸರ್ಕಾರಿ ಬಾಲಕರ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೇಂದ್ರ ನಡೆಸುತ್ತಿದ್ದರು. ನಂದ್ನಗರಿ ನಿವಾಸಿ ದಿವಂಗತ ರಾಜ್ಕುಮಾರ್, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಇವರಿಗೆ ಕರ್ತವ್ಯ ಸಮಯದಲ್ಲಿ ಕರೊನಾ ಸೋಂಕು ತಗುಲಿದ್ದು, ತೀವ್ರ ಅಸ್ವಸ್ಥರಾಗಿ ಅಸುನೀಗಿದ್ದರು.(ಏಜೆನ್ಸೀಸ್)