

ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಅತಿಥೇಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದು, ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಹಂಬದಲ್ಲಿರುವ ಯುವ ಭಾರತ ತಂಡವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
ಐಪಿಎಲ್ನಲ್ಲಿ ತಮ್ಮ ಪ್ರದರ್ಶನದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದ ಯುವ ಆಟಗಾರರೇ ತಂಡದಲ್ಲಿ ಹೆಚ್ಚಿದ್ದು, ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕುರಿತು ನಾಯಕ ಶುಭಮನ್ ಗಿಲ್ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಹಾಗೂ ರೋಹಿತ್ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದರು. ವಿರಾಟ್-ರೋಹಿತ್ ಅನುಪಸ್ಥಿತಿಯಲ್ಲಿ ಅರಂಭಿಕರಾಗಿ ಯಾರು ಇಳಿಯಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿತ್ತು. ಈ ಕುರಿತು ಮಾತನಾಡಿರುವ ಶುಭಮನ್ ಗಿಲ್ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾವು ಮೊದಲಿಗೆ ಗುರಿಯನ್ನು ನೋಡುತ್ತೇವೆ. ಆ ನಂತರ ಉಳಿದ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ. 17 ವರ್ಷಗಳ ಬಳಿಕ ವಿಶ್ವಕಪ್ ಗೆದ್ದಿರುವುದು ಬಹಳ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ತುಂಬಾ ಬರುತ್ತವೆ ಎಂಬ ನಂಬಿಕೆಯಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದರಿಂದ ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ನಮ್ಮ ಮೇಲೆ ನಮಗೆ ಹೆಚ್ಚು ನಿರೀಕ್ಷೆಗಳಿದ್ದು, ಅದರ ಪ್ರಕಾರ ಆಟವಾಡುತ್ತೇವೆ. ಯುವ ತಂಡಕ್ಕೆ ಜವಾಬ್ದಾರಿ ವಹಿಸಿಕೊಳ್ಳುವ ಸಮಯ ಬಂದಿದ್ದು, ಅದನ್ನು ನಿಭಾಯಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ.