VIDEO: ಷಟ್ಲರ್​ ಪಿವಿ ಸಿಂಧು ವಿಶ್ವ ಚಾಂಪಿಯನ್​ ಪಟ್ಟಕ್ಕೆ ಒಂದು ವರ್ಷ..!

pv sindhu wc one yar
Published on

ಬೆಂಗಳೂರು: ಭಾರತದ ಸ್ಟಾರ್​ ಷಟ್ಲರ್​ ಪಿವಿ ಸಿಂಧು ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿ ಇಂದಿಗೆ (ಆಗಸ್ಟ್​ 25) ಒಂದು ವರ್ಷ ಪೂರೈಸಿದೆ. ಸ್ವಿರ್ಜಲೆಂಡ್​ನ ಬಸೆಲ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಜಯಿಸುವ ಮೂಲಕ ಹೈದರಾಬಾದ್​ ಆಟಗಾತಿರ್ ಐಸಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದಕ್ಕೂ ಮೊದಲು ಸತತ 2 ಬಾರಿ ಫೈನಲ್​ ಪ್ರವೇಶಿಸಿದರೂ ಎಡವಿದ್ದ ಸಿಂಧು 3ನೇ ಯತ್ನದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಭಾರತೀಯ ಬ್ಯಾಡ್ಮಿಂಟನ್​ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಿಂಧು 21-7, 21-7 ನೇರ ಗೇಮ್​ಗಳಿಂದ ಜಪಾನ್​ನ ನಜೋಮಿ ಓಕುಹರಾ ಎದುರು ಕೇವಲ 38 ನಿಮಿಷಗಳಲ್ಲಿ ಜಯ ದಾಖಲಿಸಿದರು. 2017ರಲ್ಲಿ ಜಪಾನ್​ ಆಟಗಾರ್ತಿ ಎದುರು 110 ನಿಮಿಷ ಹೋರಾಡಿದರೂ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು, 2019ರಲ್ಲಿ ಗೆದ್ದು ಬೀಗಿದ್ದರು.

2017ರಲ್ಲಿ ಜಪಾನ್​ ಆಟಗಾರ್ತಿ ಓಕುಹರಾ, 2018ರಲ್ಲಿ ಸ್ಪೇನ್​ನ ಕ್ಯಾರೊಲಿನ್​ ಮರಿನ್​ಗೆ ಶರಣಾಗಿದ್ದ ಸಿಂಧು, 2019ರಲ್ಲೂ ಪ್ರಶಸ್ತಿ ಸುತ್ತಿಗೇರಲು ಯಶಸ್ವಿಯಾಗಿದ್ದರು. ಆದರೆ, ಸಿಂಧು ಈ ಬಾರಿಯಾದರೂ ಸ್ವರ್ಣ ಜಯಿಸಲಿ ಎಂಬುದೇ ಎಲ್ಲರ ಆಶಯವಾಗಿತ್ತು. ಹಿಂದೆ 4 ಬಾರಿ ವಿಶ್ವಚಾಂಪಿಯನ್​ ಪದಕ ಗೆದ್ದಿದ್ದರೂ ಸ್ವರ್ಣ ಪಾತ್ರ ಸಿಂಧು ಪಾಲಿಗೆ ಮರೀಚಿಕೆಯಾಗಿತ್ತು. ಶತಯಾಗತಾಯ ಹೋರಾಡಿ ಸ್ವರ್ಣ ಗೆಲ್ಲುವ ಜಿದ್ದಿಗೆ ಇಳಿದ ಸಿಂಧು ನೀರು ಕುಡಿದಷ್ಟೇ ಸುಲಭವಾಗಿ ವಿಶ್ವಚಾಂಪಿಯನ್​ ಪಟ್ಟ ಅಲಂಕರಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಷಟ್ಲರ್​ ಎನಿಸಿಕೊಂಡರು. ವಿಶ್ವ ಚಾಂಪಿಯನ್​ನಲ್ಲಿ 5 ಪದಕ ಜಯಿಸಿದ ಚೀನಾ ಜಾಂಗ್​ ನಿಂಗ್​ ಅವರ ದಾಖಲೆಯನ್ನು ಸಿಂಧು ಸರಿಗಟ್ಟಿದರು. 2013, 2014ರಲ್ಲಿ ಕಂಚು ಜಯಿಸಿದ್ದರು,

ಸಿಂಧು 3 ವರ್ಷ ವಿಶ್ವಚಾಂಪಿಯನ್​...!

2016ರ ರಿಯೋ ಒಲಿಂಪಿಕ್ಸ್​ನಲ್ಲೂ ಫೈನಲ್​ ಪ್ರವೇಶಿಸಿದ್ದ ಸಿಂಧು, ಇದೀಗ ಮುಂಬರುವ ಟೋಕಿಯೊ ಒಲಿಂಪಿಕ್ಸ್​ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸಕ್ತ ವರ್ಷ ಒಲಿಂಪಿಕ್ಸ್​ ನಿಗದಿಯಾಗಿದ್ದರಿಂದ ವಿಶ್ವಚಾಂಪಿಯನ್​ಷಿಪ್​ ಇರಲಿಲ್ಲ. ಆದರೆ, ಕರೊನಾ ವೈರಸ್​ನಿಂದಾಗಿ ಒಲಿಂಪಿಕ್ಸ್​ ಮುಂದೂಡಿಕೆಯಾಗಿರುವ ಕಾರಣ ಮುಂದಿನ ವರ್ಷವೂ ವಿಶ್ವಚಾಂಪಿಯನ್​ ನಡೆಯುವುದಿಲ್ಲ. ಏನಿದ್ದರೂ 2022ರವರೆಗೂ ಪಿವಿ ಸಿಂಧು ಅವರೇ ವಿಶ್ವಚಾಂಪಿಯನ್​ ಆಗಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net