ಆರೋಪಿಗಳ ಬಂಧನಕ್ಕೆಂದು ತೆರಳಿದ್ದ ಬೆಂಗಳೂರು ಪೊಲೀಸರನ್ನೇ ಬಂಧಿಸಿದ ಕೇರಳದ ಆರಕ್ಷಕರು…

bangalore police'
ಬಂಧಿತ ಬೆಂಗಳೂರು ಪೊಲೀಸ್ ಇನ್​ಸ್ಪೆಕ್ಟರ್​ ಶಿವಪ್ರಕಾಶ್
Published on

ಬೆಂಗಳೂರು: ಬೆಂಗಳೂರು ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಲೆಂದು ಕೇರಳಕ್ಕೆ ತೆರಳಿದ್ದರು. ಈ ಸಂದರ್ಭ ಕೇರಳದ ಕಲ್ಮಶೇರಿ ಪೊಲೀಸರು ಒಟ್ಟು, ನಾಲ್ವರು ಬೆಂಗಳೂರು ಪೊಲೀಸರನ್ನು ಅರೆಸ್ಟ್ ಮಾಡಿದ್ದಾರೆ.

ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರು, ಆರೋಪಿಗಳಿಂದ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊರಿಸಲಾಗಿದ್ದು, ಆರೋಪಿಗಳು ಕಲ್ಮಶೇರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?

ಈ ಹಿಂದೆ ಉದ್ಯೋಗ ಕೊಡಿಸುವುದಾಗಿ ಸಾಫ್ಟ್​ವೇರ್ ಇಂಜಿನಿಯರ್​ಗೆ ಮೋಸವಾಗಿದ್ದ ಹಿನ್ನೆಲೆಯಲ್ಲಿ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ, ಹಣದ ರಿಕವರಿಗೆಂದು ಕೇರಳಕ್ಕೆ ತೆರಳಿದ್ದರು. ಚಂದಕ್ ಶ್ರೀಕಾಂತ್ ಎಂಬುವವರು ಕೊಟ್ಟಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೇರಳಕ್ಕೆ ತೆರಳಿದ್ದು.

ಶ್ರೀಕಾಂತ್​ ಎನ್ನುವವರಿಗೆ ಕೇರಳ ಮೂಲದ ಆರೋಪಿಗಳು ಆನ್​ಲೈನ್ ಮೂಲಕ 26 ಲಕ್ಷ ರೂ. ಹಣ ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ವೈಟ್​ಫೀಲ್ಡ್​ನ ಸಿಇಎನ್ ಪೊಲೀಸರಿಗೆ ಮೊದಲಿಗೆ ಮಡಿಕೇರಿಯ ಆರೋಪಿ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್​ನಲ್ಲಿ 2 ಕೋಟಿ ರೂ. ಟ್ರಾನ್ಷಕ್ಷನ್ ಆಗಿರುವುದು ಪತ್ತೆಯಾಗಿದೆ.

ಜಾಡು ಹಿಡಿದು ಹೊರಟವರ ಮೇಲೇ ಆರೋಪ!

ವೈಟ್​ಫೀಲ್ಡ್ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗು ತಂಡ ಇದರ ಜಾಡನ್ನೇ ಹಿಡಿದು ಕೇರಳಕ್ಕೆ ಹೊರಟಿದ್ದು. ಈ ಸಂದರ್ಭ, ನೌಶಾದ್ ಎಂಬುವನಿಂದ ಆನ್​ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲು ತೆರಳಿದ್ದ ಬೆಂಗಳೂರಿನ ಪೊಲೀಸರು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಪೊಲೀಸರು ತೆರಳಿದ್ದರು.

ಈ ವೇಳೆ 3 ಲಕ್ಷ ರೂ. ನೀಡುವಂತೆ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗೆಂದು ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಬೆಂಗಳೂರು ಪೊಲೀಸರು ಪ್ರಕರಣದ ತನಿಖೆಗೆಂದು ಬಂದಿರುವುದಾಗಿ ತಿಳಿಸಿದ್ದರೂ, ಇನ್ಸ್​ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆಯೇ ಕಲ್ಲಂಚೇರಿ ಪೊಲೀಸರು ಎಫ್ಐಆರ್ ದಾಖಲು ಕೂಡ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್​ಪೆಕ್ಟರ್​ ಶಿವಪ್ರಕಾಶ್ ಹಾಗೂ ಸಿಬ್ಬಂದಿಗಳು ಕೇರಳ ಪೊಲೀಸರ ವಶದಲ್ಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net