

ಕಣ್ಣೂರು: ಕೇರಳದ ಪಯನ್ನೂರಿನಲ್ಲಿರುವ ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ.
ಮಂಗಳವಾರ ಬೆಳಗ್ಗೆ ನಡೆದ ಬಾಂಬ್ ದಾಳಿಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳೀಯ ಪೊಲೀಸ್ ಠಾಣೆ ಸಮೀಪದಲ್ಲೇ ಈ ದಾಳಿ ನಡೆದಿದೆ. ದಾಳಿ ವೇಳೆ ಯಾರಿಗೂ ಗಾಯಗಳಾಗಿಲ್ಲ, ಕಟ್ಟಡದ ಕಿಟಕಿ ಗಾಜುಗಳಿಗೆ ಮಾತ್ರ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯರಾತ್ರಿ 1.30 ರ ಸುಮಾರಿಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಯ್ಯನ್ನೂರಿನಲ್ಲಿರುವ ರಾಷ್ಟ್ರ ಭವನ ಎಂಬ ಆರ್ಎಸ್ಎಸ್ ಕಚೇರಿಯ ಮೇಲೆ ಸ್ಥಳೀಯವಾಗಿ ತಯಾರಿಸಿದ ಬಾಂಬ್ ಅನ್ನು ಎಸೆದಿದ್ದಾರೆ ಎಂದು ತಿಳಿದುಬಂದಿದೆ. 2010-2016ರ ನಡುವೆ ಈ ಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲವಾರು ದಾಳಿಗಳು ನಡೆದಿವೆ.
ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ಕಚೇರಿ ಮೇಲೆ ದಾಳಿಯಾಗಿದೆ ಎಂದರೆ ಏನರ್ಥ, ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಎಂದು ಬಿಜೆಪಿ ನಾಯಕ ಟಾಮ್ ವಡಕ್ಕನ್ ತರಾಟೆಗೆ ತೆಗೆದುಕೊಂಡಿದ್ದು, ಕಣ್ಣೂರಿನಂತರ ಸೂಕ್ಷ್ಮ ಜಿಲ್ಲೆಯಲ್ಲಿ ಕಚೇರಿಗಳಿಗೆ ವಿಶೇಷವಾಗಿ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ಯಾವುದೇ ಕಚೇರಿಗೆ ಹಾನಿಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)