ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯ : ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿ ಅಭಿಮತ

pacchinadka
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕೃಷಿಯನ್ನೇ ಬದುಕಾಗಿಸಿ ಕಠಿಣ ಪರಿಶ್ರಮದಿಂದ ದುಡಿದು ಹಿರಿಯರು ಜೀವನ ಸಾಗಿಸುತ್ತಿದ್ದರು. ಆದರೆ ಈಗ ಯುವಸಮುದಾಯ ಕೃಷಿಯಿಂದ ದೂರ ಸರಿದಿದೆ. ಇಂತಹ ಕ್ರೀಡಾಕೂಟಗಳಿಂದ ನಾವು ವರ್ಷದಲ್ಲಿ ಒಂದು ದಿನವನ್ನು ಕೆಸರುಗದ್ದೆಯಲ್ಲಿ ಕಳೆದು ನಮ್ಮ ಮಣ್ಣು, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸಂಘಟನೆಗಳು ನಡೆಸುತ್ತಿರುವುದು ಶ್ಲಾಘನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿ ನುಡಿದರು.

ಓಂ ಫ್ರೆಂಡ್ಸ್ ಕ್ಲಬ್ ಕಳ್ಳಿಗೆ ಪಚ್ಚಿನಡ್ಕ ಇದರ ಬೆಳ್ಳಿಹಬ್ಬ ಪ್ರಯುಕ್ತ ರಾಧಾಕೃಷ್ಣ ಬಾಲಗೋಕುಲ ಪಚ್ಚಿನಡ್ಕ ಸಹಯೋಗದೊಂದಿಗೆ ಬಟ್ಟತ್ತೋಡಿ ಉಮೇಶ್ ಶೆಟ್ಟಿಯವರ ತಾರೆಮಾರ್ ಗದ್ದೆಯಲ್ಲಿ ನಡೆದ ಪ್ರಥಮ ವರ್ಷದ ಕೆಸರ‌್ದ ಕಂಡೊಡು ಕುಸಲ್ದ ಪಂಥ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಳುವರ ಹಿಂದಿನ ಜೀವನ ಪದ್ಧತಿ ಮರೆಯಾಗುತ್ತಿದೆ. ಕೃಷಿ ಕೆಲಸಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಬೇಸಾಯವಿಲ್ಲದೆ ಅನೇಕ ಗದ್ದೆಗಳು ಹಡಿಲು ಭೂಮಿಯಾಗಿ ಪರಿವರ್ತನೆಗೊಂಡಿವೆ. ಈ ಬಗ್ಗೆ ಯುವಸಮುದಾಯ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಕ್ರೀಡಾಕೂಟದ ಜತೆಗೆ ಬೇಸಾಯವನ್ನು ಪರಿಚಯಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದು ಬಟ್ಟತ್ತೋಡಿ ಉಮೇಶ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯಪಟ್ಟರು.

ಉದ್ಯಮಿ ಭುವನೇಶ್ ಪಚ್ಚಿನಡ್ಕ ಗದ್ದೆಗೆ ಹಾಲೆರೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ, ಶೇಖರ್ ಶೆಟ್ಟಿ ಪೊಟ್ಟುಗುಡ್ಡೆ, ವಿಶ್ವನಾಥ ದಾಸರಕೋಡಿ, ಡೇವಿಡ್ ರಾಡ್ರಿಗಸ್, ಮಲ್ಲಿಕಾ ಡಿ. ರೈ ಪಚ್ಚಿನಡ್ಕ, ದಯಾನಂದ ರೈ, ಜಯಲಕ್ಷ್ಮೀ ಪಚ್ಚಿನಡ್ಕ, ದಿನೇಶ್ ಪಡೆಂಕಿಲ್‌ಮಾರ್, ಸತೀಶ್ ಅಮೀನ್ ಪಡು, ಪದ್ಮನಾಭ ಪೂಜಾರಿ ಪಡೆಂಕಿಲ್‌ಮಾರ್, ಉಮೇಶ್ ಶೆಟ್ಟಿ ಕಯ್ಯಳಿಮಾರ್‌ಗುತ್ತು, ವಿಜಯ್‌ಕುಮಾರ್ ಅಮ್ಟಾಡಿ, ರಾಮಚಂದ್ರ ಸುವರ್ಣ ತುಂಬೆ ಮತ್ತಿತರರಿದ್ದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು.

ಕಂಬಳದ ಮೆರುಗು

ಕಳ್ಳಿಗೆ ಪಚ್ಚಿನಡ್ಕ ನಟ್ಟಿಲ್‌ಗುತ್ತು ದಿವಂಗತ ದೇವು ಪೂಜಾರಿಯವರ ಕೋಣಗಳ ಓಟ ಕ್ರೀಡೆಗೆ ಕಂಬಳದ ಮೆರುಗನ್ನು ನೀಡಿತು. ಕಂಬಳ ಕೋಣಗಳ ಮಾಲೀಕ ಯಶೋಧರ ಪೂಜಾರಿ ಉಪಸ್ಥಿತರಿದ್ದರು. ಅಡಕೆ ಹಾಳೆ ಎಳೆಯುವುದು, ನಿಧಿ ಶೋಧ, ರಿಲೇ, 100 ಮೀ. ಓಟ, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು ಇನ್ನಿತರ ಆಕರ್ಷಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಿಸಿಲಿನ ಜಳಕ್ಕೆ ಸ್ಪರ್ಧಿಗಳಿಗೆ ತಂಪೆರೆಯಲು ಶವರ್ ವ್ಯವಸ್ಥೆ ಮಾಡಲಾಗಿತ್ತು. ಕೆಸರಿನ ಲೇಪನವನ್ನು ಹೊಂದಿದ್ದ ಕಾರ್ಯಕ್ರಮದ ಶೀರ್ಷಿಕೆಯ ಬ್ಯಾನರ್‌ಗೆ ನೀರನ್ನು ಸಿಂಪಡಿಸುವ ಮೂಲಕ ವಿಶೇಷವಾಗಿ ಅನಾವರಣಗೊಳಿಸಲಾಯಿತು. ಬಿಸಿಲಿನ ತೀವ್ರತೆಯ ನಡುವೆಯೂ ಕ್ರೀಡಾಪಟುಗಳ ಉತ್ಸಾಹ ಕಡಿಮೆಯಾಗಲಿಲ್ಲ. ಅಚ್ಚುಕಟ್ಟಿನ ವ್ಯವಸ್ಥೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net