

ನವದೆಹಲಿ: 16 ವರ್ಷದ ಬಾಲಕಿಯ ಮೇಲೆ 68 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಆದರೆ ರಹಸ್ಯ ಕ್ಯಾಮರಾದಲ್ಲಿ ಕೃತ್ಯ ರೆಕಾರ್ಡ್ ಆಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆ ಮಂಗಳವಾರ ಪೊಲೀಸರನ್ನು ಸಂಪರ್ಕಿಸಿ ಆರೋಪಿಯ ಮಗ ಚಿತ್ರೀಕರಿಸಿದ ವೀಡಿಯೊವನ್ನು ತೋರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಏಪ್ರಿಲ್ 20 ಮತ್ತು 30 ರ ನಡುವೆ ಆರೋಪಿಯ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯನ್ನು ಯಾರಿಗೂ ಹೇಳದಂತೆ ವೃದ್ಧ ಹುಡುಗಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಸಂತ್ರಸ್ತೆ ಇಲ್ಲಿಯವರೆಗೆ ಭಯದಲ್ಲಿಯೇ ಇದ್ದು ಘಟನೆಯ ವಿಡಿಯೋವನ್ನು ಆಕೆಯ ತಂದೆ ನೋಡಿದಾಗಲೇ ಆಕೆ ವಿಷಯ ಬಹಿರಂಗಪಡಿಸಿದ್ದಾಳೆ.
ಆರೋಪಿಯು ಸಂತ್ರಸ್ತೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದು ಆಗಾಗ್ಗೆ ಅವರ ಕುಟುಂಬವನ್ನು ಭೇಟಿ ಮಾಡಿ ಧಾರ್ಮಿಕ ಪ್ರವಾಸಗಳಲ್ಲಿ ಅವರೊಂದಿಗೆ ಹೋಗುತ್ತಿದ್ದರು. ಈ ಕುರಿತಾಗಿ ಹುಡುಗಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆ ನಡೆದ ದಿನ ಬಾಲಕಿ ತನ್ನ ಮನೆಯ ಹೊರಗೆ ಒಬ್ಬಳೇ ಇದ್ದಾಗ ಈ ವೃದ್ಧ ಆಮಿಷವೊಡ್ಡಿ ತನ್ನ ಮನೆಗೆ ಕರೆದೊಯ್ದಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆ ವ್ಯಕ್ತಿ ಆಕೆಯನ್ನು ಮನೆಯ ಮೂಲೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿಯ 40 ವರ್ಷದ ಮಗ ತನ್ನ ತಂದೆ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ಶಂಕಿಸಿದ್ದಾನೆ ಮತ್ತು ರಹಸ್ಯವಾಗಿ ಫೋನ್ ಅನ್ನು ತನ್ನ ಕೋಣೆಯಲ್ಲಿ ಇರಿಸಿದ್ದ. ಆದರೆ ಅಚಾನಕ್ ಆಗಿ ಅತ್ಯಾಚಾರದ ಘಟನೆ ರೆಕಾರ್ಡ್ ಆಗಿದೆ.
ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸಿಸುವ ಮಗ ತನ್ನ ತಂದೆಯೊಂದಿಗೆ ಕೆಟ್ಟ ಸಂಬಂಧವನ್ನು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮತ್ತು ಆತನ ಮಗನನ್ನು ವಿಚಾರಣೆ ನಡೆಸಿದ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 506 (ಬೆದರಿಕೆ) ಮತ್ತು 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ರೂಪದ ಬಲಪ್ರಯೋಗ), ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯಿದೆ ಮತ್ತು ಆರೋಪಿಯಿಂದ ಮಕ್ಕಳ ರಕ್ಷಣೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಲ್ಸಿ ಹೇಳಿದರು.
ಏತನ್ಮಧ್ಯೆ, ವಿಡಿಯೋ ರೆಕಾರ್ಡ್ ಮಾಡಿ ಸಂತ್ರಸ್ತೆಯ ತಂದೆಯೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಆರೋಪಿಯ ಮಗನ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ವಿಡಿಯೋ ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯ ಮಗನ ಅಪರಾಧವನ್ನು ಸಾಬೀತುಪಡಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
"ಐಟಿ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳನ್ನು ಸಾಕ್ಷ್ಯಾಧಾರಗಳು ದಾಖಲೆಯಲ್ಲಿ ಬರುವುದರಿಂದ ಅನ್ವಯಿಸಲಾಗುತ್ತಿದೆ" ಎಂದು ಡಿಸಿಪಿ ಸೇರಿಸಿದ್ದಾರೆ.
ಘಟನೆಯನ್ನು ಪೊಲೀಸರಿಗೆ ತಿಳಿಸದಂತೆ ಒತ್ತಡ ಹೇರಿದ ಆರೋಪದ ಮೇಲೆ ಸಂತ್ರಸ್ತೆಯ ಕುಟುಂಬದ ನೆರೆಹೊರೆಯವರಾದ ನರೇಂದರ್ ಎಂಬಾತನ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಹಲ್ಲೆಯ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಸಂತ್ರಸ್ತೆಗೆ ಸಮಾಲೋಚನೆ ನಡೆಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಗೆ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಕೌನ್ಸೆಲಿಂಗ್ ಸೆಷನ್ ಅನ್ನು ಕೈಗೊಳ್ಳಲು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಗೆ ಮನವಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು. ತನಿಖೆ ನಡೆಯುತ್ತಿದೆ ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಬೆಂಬಲ ನೀಡಲಾಗುತ್ತಿದೆ" ಎಂದು ಡಿಸಿಪಿ ಹೇಳಿದರು. (ಏಜೆನ್ಸೀಸ್)