ಟೆಂಪೋ ಲಾರಿ ಡಿಕ್ಕಿಯಾಗಿ ವೃದ್ಧ ಮೃತ್ಯು

adam
Published on

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಆಡಂ ಕುದ್ರು ಬಳಿ ಗುರುವಾರ ಸಂಜೆ ಟೆಂಪೋ ಲಾರಿ ಹರಿದು ಬಸ್ ಹತ್ತುತ್ತಿದ್ದಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಫರಂಗಿಪೇಟೆ ರೊಟ್ಟಿಗುಡ್ಡೆ ನಿವಾಸಿ ಆದಂ(63) ಮೃತಪಟ್ಟವರು. ಮಂಗಳೂರಿನಿಂದ ಮುಡಿಪುವಿಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗುರುವಾರ ಸಂಜೆ ಅಡಂಕುದ್ರು ಬಳಿ ತಲುಪಿದಾಗ ತಾಂತ್ರಿಕ ಸಮಸ್ಯೆ ಎದುರಾಗಿ ನಿಂತಿದೆ. ಈ ವೇಳೆ ಆದಂ ಅವರು ಬಸ್ಸಿನಿಂದ ಕೆಳಗಿಳಿದು ಎದುರಿನಲ್ಲಿ ನಿಂತಿದ್ದ ಖಾಸಗಿ ಬಸ್ ಹತ್ತಲು ತೆರಳುತ್ತಿದ್ದರು. ಇದೇ ಸಂದರ್ಭ ಇಂಟರ್‌ಲಾಕ್ ಹೇರಿಕೊಂಡು ಹಿಂದಿನಿಂದ ಬಂದ ಟೆಂಪೋ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಎಡಕ್ಕೆ ತಿರುಗಿದೆ. ಹೆದ್ದಾರಿ ಬದಿಯ ಬೇಕರಿ ಮುಂಭಾಗದಲ್ಲಿ ನಿಂತಿದ್ದ ಇಲೆಕ್ಟ್ರಿಕ್ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಆದಂ ಅವರ ಮೇಲೆ ಹರಿದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲಿಗೂ ನಿಲ್ಲದ ಟೆಂಪೋ ಲಾರಿ ಮುಂದೆ ಸಾಗಿ ಬೇಕರಿಯ ಬೃಹತ್ ನಾಮಫಲಕದ ಕಮಾನು ಮತ್ತು ಗೂಡಂಗಡಿಯೊಂದಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಘಟನೆ ನಡೆದ ಬಳಿಕ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟೆಂಪೋ ಡಿಕ್ಕಿ ಹೊಡೆದಿದ್ದ ಇಲೆಕ್ಟ್ರಿಕ್ ಕಾರಿನಲ್ಲಿ ಮಕ್ಕಳ ಸಹಿತ ಆರು ಮಂದಿ ಇದ್ದು, ಚಾಲಕ ತಿಂಡಿ ಖರೀದಿಗಾಗಿ ಬೇಕರಿಗೆ ತೆರಳಿದ್ದರು. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net